ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಇನ್‌ಸ್ಟಿಟ್ಯೂಟ್‌ಆಫ್ ಕಮ್ಯುನಿಕೇಷನ್ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ಸಮಾವೇಶ 2026 ಬುಧವಾರ ಸಮಾಪನಗೊಂಡಿತು.

ನಿಟ್ಟೆ ವಿಶ್ವವಿದ್ಯಾನಿಲಯದ ಉಪ ಕುಲಸಚಿವೆ ಪ್ರೊ. ಡಾ. ಸುಮಾ ಬಲ್ಲಾಳ್ ಅವರು ಸಮಾರೋಪ ಭಾಷಣ ಮಾಡಿದರು. ಮಾಧ್ಯಮವು ಸತ್ಯಾಂಶ, ದತ್ತಾಂಶಗಳನ್ನು ಆಧಾರವಾಗಿ ಇರಿಸಿಕೊಂಡು ಮಾನವ ಪರವಾದ ವರದಿಗಾರಿಕೆಯನ್ನು ಮಾಡಬೇಕಾದ್ದು ಮಾಧ್ಯಮಗಳ ಪ್ರಮುಖ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು.

ಮಾಧ್ಯಮವು ಈಗ ಹಿಂದಿನಂತೆ ಉಳಿದಿಲ್ಲ; ಹೊಸ ಹೊಸ ಆಯಾಮಗಳನ್ನು ಅಳವಡಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಇತ್ಯಾದಿ ತಂತ್ರಜ್ಞಾನಗಳ ಅಳವಡಿಕೆಯಾಗಿದೆ. ಆದರೆ, ಈ ಸಮಾವೇಶದ ಆಶಯವಾದ ಶಾಂತಿ, ಯುದ್ಧವಿರಾಮ ಇಂತಹ ವಿಚಾರಗಳಲ್ಲಿ ಮಾಧ್ಯಮವು ಜನಪರವಾದ ನಿಲುವುಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ರಾಯ್ಟರ್ಸ್‌ನಿವೃತ್ತ ವರದಿಗಾರ ಸ್ಟ್ಯಾನ್ಲಿ ಕರ್ವಾಲೋ, ಕೃತಕ ಬುದ್ಧಿಮತ್ತೆ ಸುದ್ದಿಯನ್ನು ನಿರ್ಧರಿಸಬಾರದು. ಸುದ್ದಿಯನ್ನು ಪ್ರಕಟಿಸಲು ವರದಿಗಾರನಿಗೆ ಸ್ವಾತಂತ್ರ್ಯ ಇರಬೇಕು. ಅಂತೆಯೇ ಸುದ್ದಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಓದುಗನಿಗೆ ಇರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರಿಗೆ ಮಾಧ್ಯಮ ಶ್ರೇಷ್ಠತಾ ಪ್ರಶಸ್ತಿ – 2026 ಅನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿದಂಬರ ಅವರು, ಸತ್ಯಾಧಾರಿತ ವರದಿಗಾರಿಕೆಗೆ ನಾನು ಆದ್ಯತೆ ನೀಡಿದೆ. ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ವಿದ್ಯಾರ್ಥಿಗಳು ಸತ್ಯಾಂಶವನ್ನು ಸಂಶೋಧಿಸಿ, ಧೈರ್ಯದಿಂದ ವರದಿ ಮಾಡುವ ಕಲೆಯನ್ನು ಈಗಿಂದಲೇ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಹ ಪ್ರಾಧ್ಯಾಪಕ ಡಾ. ನೇಸರ ಕಾಡನಕುಪ್ಪೆ ಪ್ರಶಸ್ತಿ ಸಂದೇಶ ವಾಚಿಸಿದರು. ಹಿರಿಯ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ವರದೇಶ್‌ಹಿರೇಗಂಗೆ ಅವರು ಸಮಾರಂಭವನ್ನು ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ ಬಿ.ಎನ್. ಭಾಗವಹಿಸಿದ್ದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಮೌಲ್ಯ ಬಾಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಹಾಗೂ ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ. ಅನಿಶಾ ವಂದನಾರ್ಪಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಣಮ್ಯ ಭಟ್ ನಿರೂಪಿಸಿದರು. ಸಮಾವೇಶದಲ್ಲಿ ಆಯೋಜಿಸಿದ್ದ ಪತ್ರಿಕಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತರು, ಪೋಸ್ಟರ್‌ಪ್ರದರ್ಶನ ಸ್ಪರ್ಧೆಯ ವಿಜೇತರು ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಸಮಾವೇಶದ ಗೋಷ್ಠಿ ಹಾಗೂ ಮಾಧ್ಯಮ ಕಾರ್ಯಾಗಾರ:
ಸಮಾರೋಪ ಸಮಾರಂಭಕ್ಕೂ ಮುನ್ನ ನಡೆದ ವಿಚಾರ ಗೋಷ್ಠಿಯಲ್ಲಿ ಟೈಮ್ಸ್ ಆಫ್‌ಇಂಡಿಯಾ ಹಿರಿಯ ಸಹಾಯಕ ಸಂಪಾದಕ ಚೇತನ್‌ಕುಮಾರ್, ಹಿರಿಯ ಪತ್ರಕರ್ತ ಹಾಗೂ ರಾಯ್ಟರ್ಸ್‌ನಿವೃತ್ತ ವರದಿಗಾರ ಸ್ಟ್ಯಾನ್ಲಿ ಕರ್ವಾಲೋ ವಿಚಾರ ಮಂಡಿಸಿದರು. ಮಣಿಪಾಲ್ ಸಮಾಜ ವಿಜ್ಞಾನ, ಮಾನವಿಕ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ವಿಗ್ನೇಶ್‌ರಾಮ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯನಿರತ ಪತ್ರಕರ್ತರಿಗಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರವನ್ನು ಡೇಟಾ ಲೀಡ್ಸ್‌ಅಕಾಡೆಮಿಯ ಎಐ ಫಾರ್‌ಡಿಜಿಟಲ್ ರೆಡಿನೆಸ್ ಅಂಡ್ ಅಡ್ವಾನ್ಸ್‌ಮೆಂಟ್‌(ADiRA) ಸಂಸ್ಥೆಯ ಎಸ್‌. ಕುಮಾರ್‌ಅವರು ನಡೆಸಿಕೊಟ್ಟರು.