ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ (FMHMC), ದೇರಳಕಟ್ಟೆ ಇದರ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗವು 2026ರ ಫೆಬ್ರವರಿ 8ರಂದು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಆಡಿಟೋರಿಯಂ, ದೇರಳಕಟ್ಟೆಯಲ್ಲಿ “QUEST 2026” ಎಂಬ ಏಕದಿನ ರಾಷ್ಟ್ರೀಯ ಸೆಮಿನಾರ್ ಅನ್ನು ಆಯೋಜಿಸಲಾಗಿದೆ.
QUEST 2026 ಸೆಮಿನಾರ್‌ವು ವೈದ್ಯಕೀಯ, ಫಾರೆನ್ಸಿಕ್ ಸೈನ್ಸ್, ಟಾಕ್ಸಿಕಾಲಜಿ, ಫಾರ್ಮಸಿ, ಕಾನೂನು ಹಾಗೂ ಆಯುಷ್ ಕ್ಷೇತ್ರಗಳ ತಜ್ಞರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶ ಹೊಂದಿದೆ. ಫಾರೆನ್ಸಿಕ್ ಮೆಡಿಸಿನ್‌ಗೆ ಸಂಬಂಧಿಸಿದ ಇತ್ತೀಚಿನ ಮೆಡಿಕೋ-ಲೀಗಲ್ ಕ್ರಮಗಳು ಮತ್ತು ಕಾನೂನು ವಿಷಯಗಳ ಬಗ್ಗೆ ಸ್ಪಷ್ಟ ಅರಿವು ನೀಡುವುದು, ಶೈಕ್ಷಣಿಕ ಚರ್ಚೆಯನ್ನು ಉತ್ತೇಜಿಸುವುದು ಹಾಗೂ ನವೀಕೃತ ಮಾಹಿತಿಯನ್ನು ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.
ವೈಜ್ಞಾನಿಕ ಕಾರ್ಯಕ್ರಮದಲ್ಲಿ ತಜ್ಞರ ಉಪನ್ಯಾಸಗಳು ಒಳಗೊಂಡಿವೆ. ಡಾ. ಜಗದೀಶ್ ರಾವ್, ಪ್ರಾಧ್ಯಾಪಕರು ಮತ್ತು ವಿಭಾಗಾಧ್ಯಕ್ಷರು, ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು, ಮಂಗಳೂರು ಇವರಿಂದ “ಆಟಾಪ್ಸಿ – ಕಾಂಟೆಂಪರರಿ ಪರ್ಸ್ಪೆಕ್ಟಿವ್ಸ್ ಅಂಡ್ ಪ್ರಾಕ್ಟಿಕಲ್ ಇನ್ಸೈಟ್ಸ್”(ಶವಪರೀಕ್ಷೆ – ಸಮಕಾಲೀನ ದೃಷ್ಟಿಕೋನಗಳು ಮತ್ತು ಪ್ರಾಯೋಗಿಕ ಒಳನೋಟಗಳು) ಎಂಬ ವಿಷಯದ ಮೇಲೆ ಉಪನ್ಯಾಸ ನಡೆಯಲಿದೆ.
ಅದೇ ರೀತಿ ಅಡ್ವೊ. ಮೇಘನಾ ಆರ್. ಆನಂದ್, ಸಹಾಯಕ ಪ್ರಾಧ್ಯಾಪಕಿ, ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ , ಮಂಗಳೂರು ಇವರಿಂದ “ಲೆಜಿಸ್ಲೇಷನ್ ರಿಲೆವಂಟ್ ಟು ಆಯುಷ್” (ಆಯುಷ್‌ಗೆ ಸಂಬಂಧಿಸಿದ ಕಾನೂನು ವಿಧಿಗಳು) ಎಂಬ ವಿಷಯದ ಮೇಲೆ ಅಧಿವೇಶನ ಆಯೋಜಿಸಲಾಗಿದೆ.
ಫಾರೆನ್ಸಿಕ್ ಸೈನ್ಸ್ ಮತ್ತು ಟಾಕ್ಸಿಕಾಲಜಿಯಲ್ಲಿ ಅಂತರಶಾಖಾ ದೃಷ್ಟಿಕೋನವನ್ನು ಉತ್ತೇಜಿಸುವ ಉದ್ದೇಶದಿಂದ ಓಪನ್ ಫೋರಮ್ ಆಯೋಜಿಸಲಾಗುತ್ತದೆ. ಈ ಅಧಿವೇಶನವನ್ನು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಪ್ರಾಧ್ಯಾಪಕರು ಹಾಗೂ ವಿಭಾಗಾಧ್ಯಕ್ಷರಾದ ಡಾ. ಹರೀಶ್ ಗೌಡ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಫಾರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ವಿಭಾಗಾಧ್ಯಕ್ಷರಾದ ಡಾ. ಇಂದು ಓ. ಎಸ್. ಅವರು ಸಂಚಾಲಿಸಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ಪ್ರತಿನಿಧಿಗಳಿಗಾಗಿ ಕ್ವಿಜ್ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಧಿವೇಶನಗಳಲ್ಲಿ ಚರ್ಚಿಸಲಾದ ವಿಷಯಗಳನ್ನು ಮತ್ತಷ್ಟು ಸ್ಪಷ್ಟಗೊಳಿಸುವುದರ ಜೊತೆಗೆ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳು ಲಭ್ಯವಿರುತ್ತವೆ.
ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ- ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್‌ನ ಭಾಗವಾಗಿದ್ದು, ಕಳೆದ 145 ವರ್ಷಗಳಿಂದ ಹೋಮಿಯೋಪಥಿಕ್ ಆರೋಗ್ಯ ಸೇವೆಯಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. QUEST 2026 ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕಾಲೇಜು ತನ್ನ ಶೈಕ್ಷಣಿಕ ಬದ್ಧತೆಯನ್ನು ಮುಂದುವರಿಸುತ್ತಿದೆ.

