ಬೆಂಗಳೂರು: 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್ಗಳ (ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಇ, ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಎಂ.ಇ/ಎಂ.ಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 13 ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 14ರಂದು ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 18ರೊಳಗೆ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ.
ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪಿಜಿಸಿಇಟಿ-24ಕ್ಕೆ ಹಾಜರಾಗುವ ಅಗತ್ಯ ಇಲ್ಲ. ಆದರೆ, ಅಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಪ್ರವೇಶಕ್ಕೆ ಅರ್ಹರಾಗಬೇಕಾಗುತ್ತದೆ. ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ಸ್ನಾತಕೋತ್ತರ ಕೋರ್ಸ್ಗಳಿಗೆ ಪ್ರವೇಶ ನೀಡಲಾಗುತ್ತದೆ.