ನಂಜನಗೂಡು: ತಾಲ್ಲೂಕಿನ ಮಲ್ಲೂಪುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ 2026-27ನೇ ಸಾಲಿನ ದೊಡ್ಡಕವಲಂದೆ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಹೆಡತಲೆ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಸುಮಾರು 9 ಪ್ರೌಢಶಾಲೆಗಳ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೆಡತಲೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್ ಹಾಗೂ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೆ, ಬಾಲಕಿಯರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಮಧು ಕುಮಾರ್ ಬಿ. ಅವರು 100 ಮೀಟರ್ ಓಟ, 200 ಮೀಟರ್ ಓಟ, 4×100 ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಪವನ್ ಅವರು 800 ಮೀಟರ್ ಓಟ, 4×100 ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಿದ್ದೇಶ್ ಹೆಚ್.ಎನ್. ಅವರು 3000 ಮೀಟರ್ ಓಟ, ಎತ್ತರ ಜಿಗಿತ, 4×100 ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸುರೇಶ್ ಹೆಚ್.ಜೆ. ಅವರು ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು, ಜಾವೆಲಿನ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಜಯ್ ಅವರು 400 ಮೀಟರ್ ಓಟ, 4×100 ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಮದನ್ ಕುಮಾರ್ ಅವರು 5 ಕಿಲೋಮೀಟರ್ ವಾಕಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಮಾನಸ ಅವರು 3000 ಮೀಟರ್ ಓಟದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಜಸ್ಮಿತ ಅವರು 3 ಕಿಲೋಮೀಟರ್ ವಾಕಿಂಗ್‌ನಲ್ಲಿ ಪ್ರಥಮ ಹಾಗೂ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಷಮಿಕ ನಾಯಕ್ ಅವರು ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಪೂಜಾ ಅವರು ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು, ಜಾವೆಲಿನ್ ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು 9ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್ ಎಚ್.ಎಂ. ಪಡೆದುಕೊಂಡಿದ್ದಾರೆ. ಒಟ್ಟು 130 ಅಂಕಗಳನ್ನು ಗಳಿಸುವ ಮೂಲಕ ಹೆಡತಲೆ ಸರ್ಕಾರಿ ಪ್ರೌಢಶಾಲೆ ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಶಾಲೆಯ ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ. ನಾಗರಾಜು ಅವರ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕಿ ಜ್ಯೋತಿ, ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ. ನಾಗರಾಜು, ಶಿಕ್ಷಕರಾದ ಹರ್ಷ, ಭಾಲಚಂದ್ರ ಭಟ್, ಮಂಜುಳಾ, ಸುಕನ್ಯಾ, ರಮ್ಯಾ ಸೇರಿದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.

