ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಅಪ್ರತಿಮ ಸಾಹಸ ಮೆರೆದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಆಗಮಿಸಿದ್ದು ಇಡಿಯ ಪುತ್ತೂರಿನಲ್ಲಿ ದೇಶಭಕ್ತಿಯ ಪುಳಕವನ್ನು ಮೂಡಿಸುವಲ್ಲಿ ಸಫಲವಾಗಿದೆ. ಕಾರ್ಗಿಲ್ ಹೋರಾಟದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧನಾಗಿ ವೈರಿಗಳನ್ನು ಹೆಡೆಮುರಿ ಕಟ್ಟಿದ ಮಹಾನ್ ಯೋಧನೊಬ್ಬನನ್ನು ಪುತ್ತೂರಿಗೆ ಕರೆಸಿದ್ದಕ್ಕಾಗಿ ಅಂಬಿಕಾ ಸಂಸ್ಥೆಗಳಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

2024ರಲ್ಲಿ ಕಾರ್ಗಿಲ್ ವಿಜಯೋತ್ಸವಕ್ಕೆ ಇಪ್ಪತ್ತೈದು ವರ್ಷ ತುಂಬಿದ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತನ್ನ ಶೌರ್ಯ ಪ್ರದರ್ಶಿಸಿ ಪರಮವೀರ ಚಕ್ರ ಪ್ರಶಸ್ತಿಗೆ ಭಾಜನರಾದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಆಗಮಿಸಿ ಅಪೂರ್ವ ಕಾರ್ಯಕ್ರಮವೊಂದನ್ನು ಸಾರ್ವಜನಿಕವಾಗಿ ಕಿಲ್ಲೆ ಮೈದಾನದಲ್ಲಿ ಅಂಬಿಕಾ ಆಯೋಜಿಸಿತ್ತು.

ಇದೀಗ ಅದೇ ಕಾರ್ಗಿಲ್ ಹೋರಾಟದಲ್ಲಿ ಭಾಗಿಯಾಗಿ ಪರಮವೀರ ಚಕ್ರ ಪಡೆದ ಮತ್ತೋರ್ವ ಹೆಮ್ಮೆಯ ಸೈನಿಕ ಲೆ.ಸಂಜಯ್ ಕುಮಾರ್ ಕೂಡ ಆಗಮಿಸಿದ್ದು ಹಲವರ ಖುಷಿಗೆ ಕಾರಣವಾಗಿದೆ.

2024ರ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಆಗಮನ ಹಾಗೂ ಈಗ ಲೆ.ಸಂಜಯ್ ಕುಮಾರ್ ಅವರ ಕಾರ್ಯಕ್ರಮದ ಮುಖೇನ ಕಾರ್ಗಿಲ್ ಹೋರಾಟದಲ್ಲಿ ಭಾಗಿಯಾಗಿ ಬದುಕಿ ಬಂದು ಪರಮವೀರ ಚಕ್ರ ಪ್ರಶಸ್ತಿ ಪಡೆದವರಿಬ್ಬರೂ ಪುತ್ತೂರಿಗೆ ಆಗಮಿಸಿದಂತಾಗಿದೆ. ಮಾತ್ರವಲ್ಲದೆ ಇಡಿಯ ಪುತ್ತೂರೇ ಇಬ್ಬರೂ ಪರಮವೀರ ಭೂಷಿತರನ್ನು ಸ್ವಾಗತಿಸಿ ಗೌರವಿಸಿದ್ದು ದೇಶದಲ್ಲೇ ವಿಶೇಷ ದಾಖಲೆಯಾಗಿಯೂ ಮೂಡಿಬಂದಿದೆ.

ಪುತ್ತೂರಿನ ಮಾಜಿ ಸೈನಿಕರ ಸಂಘ, ನಾನಾ ಸಂಘ-ಸಂಸ್ಥೆಗಳು, ಪಕ್ಷಾತೀತವಾಗಿ ರಾಜಕೀಯ ನೇತಾರರು, ಸಾಮಾಜಿಕ ಮುಖಂಡರು, ಸಾರ್ವಜನಿಕರು, ವರ್ತಕರು… ಹೀಗೆ ಸಾವಿರಾರು ಮಂದಿ ಪ್ರಜ್ಞಾವಂತರೆಲ್ಲರೂ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಿ ಲೆ.ಸಂಜಯ್ ಕುಮಾರ್ ಅವರನ್ನು ಗೌರವಿಸಿದ್ದು ಪುತ್ತೂರಿನ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

ಈ ಕಾರ್ಯಕ್ರಮವನ್ನು ಆಯೋಜಿಸಿದ ಕಾರಣಕ್ಕಾಗಿ ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರನ್ನು ಹಲವಾರು ಮಂದಿ ಗಣ್ಯರು ಅಭಿನಂದಿಸಿದ್ದಾರೆ. 1962, 65ರ ಯುದ್ಧಗಳಲ್ಲಿ ಭಾಗಿಯಾದ ಪ್ರಸ್ತುತ 85 ವರ್ಷದ ಹಿರಿಯ ಯೋಧ ದೇರಣ್ಣ ಗೌಡ ಅವರು ಇದೊಂದು ಅದ್ಭುತ ಕಾರ್ಯಕ್ರಮ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸದ್ಯ ಇಂತಹ ಕಾರ್ಯಕ್ರಮ ನಡೆದಿಲ್ಲ. ಇದು ಸ್ವಾರ್ಥರಹಿತ ಕಾರ್ಯಕ್ರಮ ಎಂದು ಶ್ಲಾಘಿಸಿದರೆ ಯುದ್ಧಭೂಮಿಯ ಅನುಭವವನ್ನು ಹಲವರಿಂದ ಕೇಳಿದ್ದರೂ ನಿನ್ನೆಯ ಕಾರ್ಯಕ್ರಮ ಅತ್ಯುತ್ಕೃಷ್ಟ ಎಂದು ಹರೀಶ್ ಪುತ್ತೂರಾಯ ತಿಳಿಸಿದ್ದಾರೆ.

ಮೆರವಣಿಗೆಯ ಬಗೆಗೆ ಖುಷಿವ್ಯಕ್ತಪಡಿಸಿರುವ ಡಾ.ರಾಮಮೋಹನ ರಾವ್ ಅದೊಂದು ವಿಶಿಷ್ಟ ಮೆರವಣಿಗೆ ಎಂದು ನುಡಿದಿದ್ದಾರೆ. ಉದ್ಯಮಿ ರವಿಕೃಷ್ಣ ಕಲ್ಲಾಜೆಯವರು ಕಾರ್ಯಕ್ರಮದಲ್ಲಿ ಲೆ.ಸಂಜಯ್ ಕುಮಾರ್ ಅವರ ಮಾತುಗಳನ್ನಾಲಿಸುವಾಗ ಕಣ್ಣೀರು ಬರುತ್ತಿತ್ತು. ಪುತ್ತೂರಿನಲ್ಲಿ ನುಡಿದಂತೆ ಮಾಡಿತೋರುವವರು ಸುಬ್ರಮಣ್ಯ ನಟ್ಟೋಜರು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪತಂಜಲಿ ಯೋಗಸಂಸ್ಥೆಯ ವರದರಾಜ ಅವರು ಇದೊಂದು ಇತಿಹಾಸದಲ್ಲಿ ಉಳಿಯುವ ಕ್ಷಣ. ಇಂತಹ ಕಾರ್ಯಕ್ರಮ ನಮ್ಮ ಮುಂದಿನ ತಲೆಮಾರಿಗೆ ದೇಶಪ್ರೇಮ, ತ್ಯಾಗ ಮತ್ತು ಕರ್ತವ್ಯ ಬೋಧನೆಯ ದೀಪವಾಗಲಿ ಎಂದು ಆಶಿಸಿದ್ದಾರೆ. ಪುತ್ತೂರಿನ ಮಾಜಿ ಸೈನಿಕ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ ಅವರು ಅಂಬಿಕಾ ಸಂಸ್ಥೆಯ ಅಧ್ಯಕ್ಷರು ಹಾಗೂ ಉಳಿದವರ ದೇಶಪ್ರೇಮವನ್ನು ಕೊಂಡಾಡಿದ್ದಾರೆ.

ಪುತ್ತೂರಿನ ಜನ ಅಪಾರವಾದ ಪ್ರೀತಿಯನ್ನು ನೀಡಿದ್ದಾರೆ. ಈ ಪ್ರೀತಿಯನ್ನು ಸದಾ ನಾನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ. ಇಲ್ಲಿನ ಜನ, ಜನರ ಮನಸ್ಸು ತುಂಬಾ ಚೆನ್ನಾಗಿದೆ. ಪುತ್ತೂರಿಗರು, ಸುಬ್ರಮಣ್ಯ ನಟ್ಟೋಜರು, ಅಂಬಿಕಾ ಸಂಸ್ಥೆಗಳ ಎಲ್ಲ ವ್ಯಕ್ತಿಗಳಿಗೂ ನಾನು ತುಂಬಾ ಧನ್ಯವಾದಗಳನ್ನು ಸಮಪಿಸುತ್ತೇನೆ. ಈ ಪ್ರೀತಿಯನ್ನು ಕಂಡು ನಾನು ಭಾವುಕನಾಗಿದ್ದೇನೆ ಎಂದು ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆ.ಸಂಜಯ್ ಕುಮಾರ್ ಹೇಳಿದರು.