ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಘಟಿತರಾಗಿ ಒಗ್ಗಟ್ಟಾಗಿ ನಿಂತು ಹೋರಾಟ ಮಾಡಿದಾಗ ಮಾತ್ರ ರೈತರ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ರಾಜ್ಯಾಧ್ಯಕ್ಷ ಹಾಡ್ಯ ರವಿ ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯ ತೊರವಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘದ ನಾಮಫಲಕ ಮತ್ತು ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ರೈತರು ಸಂಘಟಿತರಾಗಬೇಕು. ರೈತರ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.

ರೈತರ ಜೊತೆ ಚಲ್ಲಾಟವಾಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ರೈತರು ಸಂಘಟಿತರಾಗಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಸರ್ಕಾರಗಳು ರೈತರ ಹಕ್ಕುಗಳನ್ನು ಕಸಿದುಕೊಳ್ಳುವ ರೈತ ವಿರೋಧಿ ಕಾನೂನುಗಳನ್ನು ರೂಪಿಸಲು ಪ್ರಯತ್ನಿಸುತ್ತಿವೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು.

ರೈತರಿಗೆ ನೀಡುವ ನೀರಾವರಿ ಯೋಜನೆಗಳು, ರಸಗೊಬ್ಬರ ಬಿತ್ತನೆ ಬೀಜಗಳು ಸಕಾಲದಲ್ಲಿ ಸರ್ಕಾರಗಳು ಪೂರೈಸದೆ ಇರುವ ಕಾರಣ, ರೈತರು ಖಾಸಗಿಯವರಿಂದ ಖರೀದಿ ಮಾಡಿ ಸರಿಯಾದ ರೀತಿಯಲ್ಲಿ ಬೆಳೆ ಬೆಳೆಯಲು ನಷ್ಟ ಅನುಭವಿಸುತ್ತಿದ್ದಾರೆ. ಮುಂಬರುವ ಅಧಿವೇಶನದಲ್ಲಿ ರೈತಪರ ಚರ್ಚಿಸಿ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು. ರಾಜ್ಯ ಸರ್ಕಾರದ ಬಜೆಟ್ ನಲ್ಲಿ ರೈತರಿಗಾಗಿ ಪ್ರತ್ಯೇಕ ಹಣ ಮೀಸಲಿಡಬೇಕು.

ರೈತರಿಗೆ ರಾಷ್ಟ್ರಕೃತ ಬ್ಯಾಂಕುಗಳಲ್ಲಿ ಕೃಷಿ ಸಾಲ ನೀಡುವ ನೀತಿ ಮಾನದಂಡ ಬದಲಾಗಬೇಕು. ಜೊತೆಗೆ ರೈತರಿಗೆ ಕೊಡುವ ಕೃಷಿ ಪಂಪ್ ಸೆಟ್ ಗಳಿಗೆ ಹಿಂದಿನ ಯೋಜನೆ ಅಕ್ರಮ ಸಕ್ರಮ ತಕ್ಷಣ ಜಾರಿಯಾಗಬೇಕು. ರೈತರು ಹೊಲ ಮತ್ತು ತೋಟಗಳಲ್ಲಿ ವಾಸವಿರುವ ಕುಟುಂಬಗಳಿಗೆ ಸಿಂಗಲ್ ಪೇಸ್ ವಿದ್ಯುತ್ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು. ಇನ್ನು ರಾಜ್ಯ ಕಬ್ಬು ಬೆಳೆಗಾರರ ರೈತ ಸಂಘಟನೆಗೆ ನೂರಾರು ರೈತರನ್ನು ಹಸಿರು ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ನಿರ್ದೇಶಕ ಹಂಡುವಿನಹಳ್ಳಿ ಮರಿಸ್ವಾಮಣ್ಣ, ರಾಜ್ಯ ಖಜಾಂಜಿ ಮಲೆಯೂರು ಹರ್ಷ, ಚಾಮರಾಜನಗರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ, ಮೈಸೂರು ಜಿಲ್ಲಾಧ್ಯಕ್ಷ ಮುದ್ದಹಳ್ಳಿ ಚಿಕ್ಕಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವಿರಮ್ಮನಹಳ್ಳಿ ಕುಮಾರ್, ಚಾಮರಾಜನಗರ ತಾಲ್ಲೂಕು ಅಧ್ಯಕ್ಷ ಅರಳಿಕಟ್ಟೆ ಕುಮಾರ್, ತಗಡೂರು ನಾಗೇಶ್, ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಪ್ರಭುಸ್ವಾಮಿ, ವೃಷಬೇoದ್ರ, ಮಹೇಶ್, ಗ್ರಾಮ ಘಟಕದ ಅಧ್ಯಕ್ಷ ರಾಜಶೇಖರ್, ಮಹದೇವ ಸೇರಿದಂತೆ ಹಲವರು ಭಾಗವಹಿಸಿದ್ದರು.