ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್ಜೆಇಸಿ) 21ನೇ ಪದವಿ ಪ್ರದಾನ ಸಮಾರಂಭವು ಆಗಸ್ಟ್ 29, 2026 ರಂದು ಮಂಗಳೂರಿನ ಕಲಾಮ್ ಆಡಿಟೋರಿಯಂನಲ್ಲಿ ಎರಡು ಹಂತಗಳಲ್ಲಿ ನಡೆಯಿತು. ಈ ಸಮಾರಂಭದಲ್ಲಿ 570 ಬಿ.ಇ ಪದವೀಧರರು ಮತ್ತು ಇಬ್ಬರು ಪಿಎಚ್.ಡಿ ಪದವೀಧರರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಪೂರ್ವಹ್ನದ ಗೋಷ್ಠಿಯಲ್ಲಿ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪದವೀಧರರಿಗೆ ಪ್ರಮಾಣಪತ್ರ ನೀಡಲಾಯಿತು. ‘ಎಫ್4 ಹೋಲ್ಡಿಂಗ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ನ ಮ್ಯಾನೇಜಿಂಗ್ ಡೈರೆಕ್ಟರ್ ಫ್ರಾನ್ಸಿಸ್ ಡಿಸೋಜ ಮುಖ್ಯ ಅತಿಥಿಗಳಾಗಿ ಹಾಗೂ ವಿಎಮ್ವೇರ್ ಬ್ರಾಡ್ಕಾಮ್ ಆರ್&ಡಿ ವಿಭಾಗದ ಇಂಜಿನಿಯರಿಂಗ್ ಲೀಡರ್ ರಿಚರ್ಡ್ ನಜರೆತ್ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಅಪರಾಹ್ನದ ಗೋಷ್ಠಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ , ಕಂಪ್ಯೂಟರ್ ಸೈನ್ಸ್ ಅಂಡ್ ಬಿಸಿನೆಸ್ ಸಿಸ್ಟಮ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಅಂಡ್ ಡೇಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಹೈದರಾಬಾದ್ನ ಅನುರಾಗ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರ್ಚನಾ ಮಂತ್ರಿ ಮುಖ್ಯ ಅತಿಥಿಗಳಾಗಿ ಮತ್ತು ಸಂಸ್ಥೆಯ ಹಳೆಯ ವಿದ್ಯಾರ್ಥಿನಿ, ಸಿಮೆನ್ಸ್ ಸಂಸ್ಥೆಯ ಸೀನಿಯರ್ ಪ್ರಾಡಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್ ಶ್ರೀಮತಿ ಆನ್ಸಿ ಜೋವಿತಾ ಕ್ರಾಸ್ಟಾ ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಾಲೇಜಿನ ಅಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರಾದ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು. ಶೈಕ್ಷಣಿಕ ವಿಭಾಗದ ಡೀನ್ ಡಾ. ಬಿನು ಕೆ. ಜಿ. ಬೆಳಗಿನ ಗೋಷ್ಠಿಯ ಅತಿಥಿಗಳನ್ನು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಡಾ. ಕೆ. ಜ್ಯೋತಿ ಸಂಜೆಯ ಗೋಷ್ಠಿಯ ಅತಿಥಿಗಳನ್ನು ಪರಿಚಯಿಸಿದರು.

ಸಮಾರಂಭದಲ್ಲಿ ಮಾತನಾಡಿದ ರಿಚರ್ಡ್ ನಜರೆತ್, ಕಷ್ಟಗಳನ್ನು ದೃಢತೆಯಿಂದ ಎದುರಿಸಲು, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮತ್ತು ಮೂಲಭೂತ ತತ್ವಗಳನ್ನು ಗಟ್ಟಿಗಳಿಸಿಕೊಳ್ಳಲು ಕರೆ ನೀಡಿದರು. ಫ್ರಾನ್ಸಿಸ್ ಡಿಸೋಜ ಅವರು ಪೋಷಕರತ್ಯಾಗವನ್ನು ಸ್ಮರಿಸುತ್ತಾ, ಪ್ರಾಯೋಗಿಕ ಕೌಶಲ್ಯ, ಸಮರ್ಪಣೆ ಮತ್ತು ನಿರಂತರತೆಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು.

ಆನ್ಸಿ ಜೋವಿತಾ ಕ್ರಾಸ್ಟಾ ನಿರಂತರ ಕಲಿಕೆ, ತಾತ್ಕಾಲಿಕ ಟ್ರೆಂಡ್ಗಳಿಗಿಂತ ಮೂಲಭೂತ ವಿಷಯಗಳ ಮೇಲಿನ ಪ್ರಾಭುತ್ವ ಹಾಗೂ ವೃತ್ತಿಜೀವನದಲ್ಲಿ ಪ್ರಾಮಾಣಿಕತೆ ಮತ್ತು ಕೃತಜ್ಞತೆಯನ್ನು ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು. ಡಾ. ಅರ್ಚನಾ ಮಂತ್ರಿ ಅವರು ಎಸ್ಜೆಇಸಿ ನಾಯಕತ್ವವನ್ನು ಶ್ಲಾಘಿಸಿ, ವಾಮಮಾರ್ಗಗಳನ್ನು ಬಿಟ್ಟು ನಿರಂತರವಾಗಿ ಕಲಿಯುತ್ತಾ ತಮ್ಮದೇ ಆದ ವಿಶಿಷ್ಟ ಹಾದಿಯನ್ನು ನಿರ್ಮಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹಾರೈಸಿದರು.

ಪ್ರಾಂಶುಪಾಲರಾದ ಡಾ. ರಿಯೋ ಡಿಸೋಜ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ದೀಕ್ಷಾ ಗೌಡ (ಸಿವಿಲ್), ಸಾಯಿ ವರ್ಧನ್ (ಇಇಇ), ಎಲ್ವಿಶಾ ರೋಸ್ವಿನ್ ಲೋಬೋ (ಎಐಎಮ್ಎಲ್) ಮತ್ತು ಗ್ಲೆನ್ ಎಲ್ರಿಕ್ ಫೆರ್ನಾಂಡಿಸ್ (ಸಿಎಸ್ಡಿಎಸ್) ಅನಿಸಿಕೆಗಳನ್ನು ಹಂಚಿಕೊಂಡು ಧನ್ಯವಾದ ಅರ್ಪಿಸಿದರು.

ಅಧ್ಯಕ್ಷತೆಯನ್ನು ವಹಿಸಿ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ಶೈಕ್ಷಣಿಕ ಶ್ರೇಷ್ಠತೆ ಮೆರೆದ ರ್ಯಾಂಕ್ ವಿಜೇತರಿಗೆ ಮತ್ತು ಕ್ರೀಡಾ ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿ, ಅತಿಥಿಗಳನ್ನು ಸನ್ಮಾನಿಸಿದರು. ಕೇಂದ್ರ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರಿಂದ ‘ರಕ್ಷಾ ಮಂತ್ರಿ ಪ್ರಶಸ್ತಿ’ ಪಡೆದ ಎನ್ಸಿಸಿ ನೇವಿ ಕೆಡೆಟ್ ಲಿಶಾ ಡಿ. ಎಸ್. (ಇಸಿಇ) ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಪೀಟರ್ ಪಾಲ್ ಸಲ್ಡಾನ್ಹಾ, ಸೋಲಿಗೆದೆಗುಂದದ ಮನೋಭಾವವನ್ನು ಬೆಳೆಸಿಕೊಳ್ಳಲು, ಹಿನ್ನಡೆಗಳನ್ನು ಕಲಿಕೆಯ ಅನುಭವವಾಗಿ ಸ್ವೀಕರಿಸಲು ಮತ್ತು ಜೀವನದ ಪ್ರಮುಖ ಆಧಾರಸ್ತಂಭಗಳಾದ ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರನ್ನು ಗೌರವಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಹ ನಿರ್ದೇಶಕರಾದ ವಂ. ಫಾ. ಕೆನೆತ್ ಆರ್. ಕ್ರಾಸ್ಟಾ, ಮುಖ್ಯ ಆಡಳಿತಾಧಿಕಾರಿ ಡಾ. ಜಾನ್ ಡಿಸಿಲ್ವ, ವಿವಿಧ ವಿಭಾಗಗಳ ಡೀನ್ಗಳು ಮತ್ತು ಮುಖ್ಯಸ್ಥರು ಉಪಸ್ಥಿತರಿದ್ದರು. ಬೆಳಗಿನ ಗೋಷ್ಠಿಯ ಸಂಚಾಲಕರಾದ ಡಾ. ಅಶ್ವಥಿ ಸಿ. ಎಮ್. ಮತ್ತು ಸಂಜೆಯ ಗೋಷ್ಠಿಯ ಸಂಚಾಲಕರಾದ ಸುಪ್ರಿಯಾ ಸಾಲ್ಯಾನ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಫ್ಲೋರೆನ್ಸ್ ನಿಶ್ಮಿತಾ ಮತ್ತು ಅಭಿಲಾಷ್ ಆರ್. ವಿ. (ಬೆಳಿಗ್ಗೆ) ಹಾಗೂ ಜೈಷ್ಮಾ ಕುಮಾರಿ ಮತ್ತು ಡ್ಯಾನಿಲಾ ನೀತಾ ಫೆರಾವೊ (ಸಂಜೆ) ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

View this post on Instagram

A post shared by News Karnataka (@newskarnataka)