ಧಾರವಾಡ: ರೀಲ್ಸ್‌ ವಿಡಿಯೋಗಾಗಿ ಕಾರಿನಲ್ಲಿ ಸ್ಟಂಟ್‌ ಮಾಡಲು ಹೋಗಿ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ಸಾವನ್ನಪ್ಪಿದ ಆಘಾತಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಷ್ ಸಂಗಳದ (15) ಮೃತ ಬಾಲಕ. ಯುಗಾದಿ ಹಬ್ಬದ ರಜೆಯ ಹಿನ್ನಲೆ ಬಾಲಕ ಹುಬ್ಬಳ್ಳಿಯಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದ. ನಂತರ ಗುರುವಾರ ಸಂಜೆ ತನ್ನ ಸ್ನೇಹಿತನ ಜೊತೆ ಸೇರಿ ಶೇಜವಾಡಕ್ಕರ್ ಪ್ಲಾಟ್‌ಗೆ ರೀಲ್ಸ್ ಮಾಡಲು ತೆರಳಿದ್ದಾನೆ.

ಅಲ್ಲಿ ಬಾಲಕರು ಪೋಷಕರ ಆಡಿ ಕಾರು ಬಳಸಿಕೊಂಡು ಅತೀ ವೇಗವಾಗಿ ಬೈಕ್ ರೈಡ್‌ ಮಾಡಿ ಸ್ಟಂಟ್ ಹಾಗೂ ಕ್ರ್ಯಾಶ್ ರೀಲ್ಸ್ ಚಿತ್ರೀಕರಿಸಲು ಪ್ಲ್ಯಾನ್‌ ಮಾಡಿದ್ದರು. ಆಗ ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಬಗ್ಗೆ ತಿಳಿಯುತ್ತಲೇ ಅಲ್ಲಿಗೆ ಬಂದ ಸ್ಥಳೀಯರು ಆಡಿ ಚಾಲನೆ ಮಾಡುತ್ತಿದ್ದ 15 ವರ್ಷದ ಅಪ್ರಾಪ್ತ ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವಿಬ್ಬರು ಸ್ನೇಹಿತರು. ನಾನು ಕಾರನ್ನು ನಿಲ್ಲಿಸಿದ್ದೆ. ಆದರೆ ಅವನೇ ಓಲಾ ಸ್ಕೂಟಿಯಲ್ಲಿ ವೇಗವಾಗಿ ಬಂದು ನನಗೆ ಗುದ್ದಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾನೆ. ಆಡಿ ಕಾರು ಯಾರದ್ದು ಎಂದಿದ್ದಕ್ಕೆ ತಂದೆಯವರ ಕಾರು ಎಂದು ಅಪ್ರಾಪ್ತ ಉತ್ತರಿಸಿದ್ದಾನೆ.