ಧಾರವಾಡ: ಸ್ನಾನಕ್ಕೆ ನೀರು ಕಾಯಿಸುವ ವೇಳೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಹೀಟರ್ ಕ್ವಾಲ್ ಬಳಸುವಾಗ ತಗುಲಿದ ಶಾಕ್‌ನಿಂದಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಮಹಿಳೆಯನ್ನು 24 ವರ್ಷದ ನಿವೇದಿತಾ ನಾಯ್ಕರ್ ಎಂದು ಗುರುತಿಸಲಾಗಿದೆ. ಎಂದಿನಂತೆ ನಿವೇದಿತಾ ಸ್ನಾನ ಮಾಡಲು ನೀರು ಕಾಯಿಸಲು ಎಲೆಕ್ಟ್ರಿಕ್ ಹೀಟರ್ ಕ್ವಾಲ್ ಬಳಸಿದ್ದರು. ನೀರು ಕಾಯಿದಿದೆಯೇ ಎಂದು ಪರೀಕ್ಷಿಸಲು ಅಥವಾ ಕ್ವಾಲ್ ತೆಗೆಯಲು ಹೋದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ.

ಕ್ವಾಲ್ ಮುಟ್ಟಿದ ತಕ್ಷಣ ಶಾಕ್ ಹೊಡೆದಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ನಿವೇದಿತಾ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.