ಚಿಕ್ಕಬಳ್ಳಾಪುರ : ಗ್ರಾಮಾಂತರ ಠಾಣೆಯ ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಜಮೀನು ವಿವಾದ ಪ್ರಕರಣದಲ್ಲಿ ‘ಬಿ-ರಿಪೋರ್ಟ್’ ಸಲ್ಲಿಸಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪವಿದ್ದು, ಇಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರೂ ಬರೋಬ್ಬರಿ 1 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು.ಮೊದಲ ಕಂತಾಗಿ 70,000 ರೂ. ಪಡೆಯುತ್ತಿದ್ದಾಗ ಎಎಸ್ಐ ವೆಂಕಟೇಶಪ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ತನಿಖೆ ನಂತರ ಪಿಎಸ್ಐ ಶರಣಪ್ಪ ಕೂಡ ಬಂಧಿತರಾಗಿದ್ದು, ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ರಘು ಅವರಿಂದ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಎಎಸ್ಐ ವೆಂಕಟೇಶಪ್ಪ ಅವರನ್ನು ವಶಕ್ಕೆ ಪಡೆದರು. ವೆಂಕಟೇಶಪ್ಪ ಹಣ ಪಡೆದ ಬೆನ್ನಲ್ಲೇ ವಿಚಾರಣೆ ನಡೆಸಿದ ಲೋಕಾಯುಕ್ತ ತಂಡ, ಪಿಎಸ್ಐ ಶರಣಪ್ಪ ಅವರ ಪಾತ್ರವನ್ನು ಖಚಿತಪಡಿಸಿಕೊಂಡು ಅವರನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ.