ಚಾಮರಾಜನಗರ : ಸುಮಾರು 30 ಪ್ರಯಾಣಿಕರಿದ್ದ ಬಸ್ಸನ್ನು ಕಾಡಾನೆಯೊಂದು ಹಿಮ್ಮೆಟ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು- ಗೇರುಮಾಳ ನಡುವೆ ನಡೆದಿದೆ.

ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದ್ದು, ಅದೂ ಅಲ್ಲದೇ ಕರ್ನಾಟಕದ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶವೂ ಹೊಂದಿಕೊಂಡಿದೆ. ಹಾಸನೂರು – ಗೇರುಮಾಳ ನಡುವೆ ತಮಿಳುನಾಡು ಬಸ್‌ ಎದುರಿಗೆ ಬಂದ ಗಜರಾಜ ಬಸ್ಸನ್ನ ಮುಂದೆ ಸಾಗಲು ಬಿಡದೆ ರಸ್ತೆ ಮಧ್ಯದಲ್ಲೇ ನಿಂತು ಘಟನೆ ನಡೆಯಿತು.

ಬಸ್‌ ಚಾಲಕ ಬಹಳ ಎಚ್ಚರಿಕೆಯಿಂದಲೇ 30 ಮಂದಿ ಪ್ರಯಾಣಿಕರಿದ್ದ ಬಸ್ಸನ್ನು ಹಿಂದಕ್ಕೆ ಚಲಿಸಿದ ಬಳಿಕ ಸಲಗ ಕೆಲ ಹೊತ್ತಿನ ಬಳಿಕ ಕಾಡಿನತ್ತ ತೆರಳಿತು. ಈ ದೃಶ್ಯವನ್ನು ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ ನಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.