ನಂಜನಗೂಡು: ತಿರುವು ಪಡೆದುಕೊಳ್ಳುತ್ತಿದ್ದ ಬೈಕ್ ಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ವೀರದೇವನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿನ್ನಸ್ವಾಮಿ (58) ಮೃತ ದುರ್ದೈವಿ. ನಂಜನಗೂಡು ಮತ್ತು ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಚಿನ್ನಸ್ವಾಮಿ ಎಂದಿನಂತೆ ಗಾರೆ ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ನಂಜನಗೂಡು ಕಡೆಯಿಂದ ವೀರದೇವನಪುರ ಗ್ರಾಮಕ್ಕೆ ಬರುತ್ತಿದ್ದು, ಗ್ರಾಮದಲ್ಲಿ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಚಾಮರಾಜನಗರ ಕಡೆಗೆ ಅತಿವೇಗವಾಗಿ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಳಿಕ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ಶವವನ್ನು ರವಾನಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರ ಮಾಡಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆದ್ದಾರಿಗಳಲ್ಲಿ ಬ್ರೇಕ್ ಹಂಸ್ ಮತ್ತು ಗ್ರಾಮಗಳ ಬಳಿ ಸೂಚನಾ ಫಲಕ ಮತ್ತು ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿಲ್ಲ ಇದರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಅಪಘಾತಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಅಪಘಾತ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತೇವೆ.
ವೀರದೇವನಪುರ ಗ್ರಾಮದ ಬಳಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಗಳಲ್ಲಿ ಬರುವ ಗ್ರಾಮಗಳಲ್ಲಿ ಬ್ರೇಕ್ ಹಂಸ್ ಮತ್ತು ಬ್ಯಾರಿಕೇಡ್ ಗಳನ್ನು ಅಳವಡಿಸಬೇಕು. ನಿಧಾನವಾಗಿ ಚಲಿಸುವಂತೆ ಹಾಗೂ ಅಪಘಾತ ವಲಯ ಎಂದು ನಾಮಫಲಗಳನ್ನು ಅಳವಡಿಸಬೇಕು. ಸಿಗ್ನಲ್ ಇರುವ ಲೈಟ್ ಅಳವಡಿಸಿ ರಸ್ತೆಗೆ ಬಣ್ಣ ಬಳಿಯಬೇಕು ಇಲ್ಲವಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

