News Karnataka Kannada
Friday, May 10 2024
ಕ್ಯಾಂಪಸ್

ಪುತ್ತೂರು: ಅಂಬಿಕಾ ಆವರಣದಲ್ಲಿನ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆ

Puttur: Taluk Sahitya Sammelana at Ambika premises gets grand opening
Photo Credit : News Kannada

ಪುತ್ತೂರು: ಪಂಪನಿಂದ ಇಂದಿನವರೆಗೆ ಜಗತ್ತಿನಾದ್ಯಂತ ಕನ್ನಡದ ಕಂಪು- ಇಂಪು ಪಸರಿಸಿದೆ. ಇದೀಗ ತಾಲೂಕು ಮಟ್ಟದಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯವನ್ನು ಉಳಿಸಿ ಬೆಳೆಸಲು ಕ್ರಮಕೈಗೊಳ್ಳುವ ಅಗತ್ಯತೆ ಹೆಚ್ಚಾಗಿದೆ ಮಕ್ಕಳಲ್ಲಿ ಸಾಹಿತ್ಯ ಪರಂಪರೆ ಮೂಡಿಸಲು ಇಂತಹಾ ಕಾರ್ಯಕ್ರಮ ಅತ್ಯವಶ್ಯಕ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿರುವ ಲಲಿತಾಂಬಿಕಾ ವೇದಿಕೆಯಲ್ಲಿ 21ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಬಾಲವನದಲ್ಲಿ ವಾಚನಾಲಯ:
ಕನ್ನಡದಲ್ಲಿ 8 ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಇಂದು ಯಾವ ಹಂತಕ್ಕೆ ತಲುಪಿದೆ ಎಂಬ ಅವಲೋಕನ ನಡೆಸಬೇಕಾಗಿದೆ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಪುತ್ತೂರಿನ ಬಾಲವನದಲ್ಲಿ ಬೃಹತ್ ವಾಚನಾಲಯ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಶಾಲೆಗಳು ಪಾರಂಪರಿಕ ಕಟ್ಟಡ:
ತಾಲೂಕಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ 5 ಕೋಟಿಗೂ ಹೆಚ್ಚು ಅನುದಾನ ನೀಡುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಕ್ರಮ ಕೈಗೊಳ್ಳಲಾಗಿದೆ. 75 ಕೊಠಡಿಗಳನ್ನೂ ಆರ್.ಸಿ.ಸಿ. ಮಾಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಕೊಂಬೆಟ್ಟಿನ ಪದವಿಪೂರ್ವ ಕಾಲೇಜನ್ನು ಪಾರಂಪರಿಕ ಕಟ್ಟಡವೆಂದು ಪರಿಗಣಿಸಿ ನವೀಕರಣ ಕೆಲಸ ಮಾಡಲಾಗುವುದು. 100 ವರ್ಷಕ್ಕೂ ಅಧಿಕ ವರ್ಷದ ಶಾಲೆ, ಕಾಲೇಜುಗಳನ್ನೂ ಪಾರಂಪರಿಕ ಕಟ್ಟಡದ ಮಾನ್ಯತೆ ನೀಡಿ ನವೀಕರಣ ಮಾಡಲಾಗುವುದು. ಪ್ರಶಸ್ತಿ ನೀಡುವ ಸಂದರ್ಭ ಕನ್ನಡದ ಅಭಿವೃದ್ಧಿಗೆ ಶ್ರಮಿಸುವವರಿಗೆ ಪರಿಗಣಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸಾಹಿತ್ಯ ಎಲ್ಲ ಮೌಲ್ಯಗಳ ತಾಯಿ:
ಸಮಾರೋಪ ಭಾಷಣ ಮಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ವರದರಾಜ ಚಂದ್ರಗಿರಿ, ಕನ್ನಡ ಭಾಷೆಯ ಕುರಿತು ಕನ್ನಡ ಶಿಕ್ಷಕರು ಹಾಗೂ ಉಪನ್ಯಾಸಕರು ಮಾತನಾಡುವುದಲ್ಲ. ಇತರರೂ ಕನ್ನಡದ ಪರವಾಗಿ ಧ್ವನಿಯೆತ್ತಬೇಕಾದ ಅಗತ್ಯತೆಯಿದೆ. ಇಂದಿನ ದಿನಗಳಲ್ಲಿ ಉದ್ಯಮಿಗಳು, ವೈದ್ಯ ವೃತ್ತಿಯಲ್ಲಿರುವವರೂ ಪುಸ್ತಕ ಬರೆಯುವ ಮೂಲಕ ಸಾಹಿತ್ಯದ ಕುರಿತು ಒಲವು ಮೂಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕನ್ನಡ ಕೇವಲ ಸಂವಹನ ಭಾಷೆಯಲ್ಲ, ಇದು ಜನರೊಂದಿಗೆ ಬೆರತು ಹೋಗಿದೆ. ಸಾಹಿತ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನೂ ನಾವು ರೂಪಿಸಿಕೊಳ್ಳಬಹುದಾಗಿದೆ. ಸಾಹಿತ್ಯ ಎಲ್ಲ ಮೌಲ್ಯಗಳ ತಾಯಿಯಾಗಿದೆ. ಆಧುನಿಕ ಜಗತ್ತಿನಲ್ಲಿ ಆಂಡ್ರಾಯ್ಡ್ ಫೋನ್ ಮೊದಲಾದವುಗಳಿಂದ ಜಗತ್ತಿನ ಎಲ್ಲಾ ಭಾಷೆಗಳೂ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ ಎಂದರು.

ಪುಸ್ತಕ ಕೊಡುಗೆ:
ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್.ಜಿ. ಮಾತನಾಡಿ, ಪುತ್ತೂರಿನಲ್ಲಿ ನಡೆದಿರುವ ಈ ಬಾರಿಯ ಸಾಹಿಯತ್ಯ ಸಮ್ಮೇಳನವನ್ನು ವಿಶೇಷವಾಗಿ ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿತ್ತು. ಅದ್ದರಿಂದಲೇ ‘ಸಾಹಿತ್ಯದ ನಡಿಗೆ ಯುವ ಜನತೆಗೆಯ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಯುವ ಜನತೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂದರಲ್ಲದೆ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾ ವಿದ್ಯಾಲಯದ ಗ್ರಂಥಾಲಯಕ್ಕೆ ಕಾರ್ಯಕ್ರಮದ ನೆನಪಿಗಾಗಿ ಸಾಹಿತ್ಯ ಸಂಬಂಧಿತ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು

ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮಕ್ಕಳ ಮನಸ್ಸಿನ ನೇರಕ್ಕೆ ಇಳಿದು ಬರೆಯಬೇಕಾದ ಅಗತ್ಯತೆಯಿದೆ. ಇದರಿಂದ ಮಕ್ಕಳನ್ನು ತಲುಪಲು ಸಾಧ್ಯವಾಗುತ್ತದೆ. ಕಾವ್ಯ ರಚನೆಯ ಸಂದರ್ಭದಲ್ಲಿ ಕಾವ್ಯ ಸಪ್ಪೆಯಾಗಿರಬಾರದು, ಕಾವ್ಯದ ಒಂದೊಂದು ಧ್ವನಿ ನೀಡಿದಾಗ ಓದುಗರನ್ನು ತಲುಪಲು ಸಾಧ್ಯ ಎಂದರು.

ಪುತ್ತೂರು ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಸರಕಾರಿ ಕಚೇರಿಗಳಿಗೆ ಆಗಮಿಸಿದಾಗ ಕನ್ನಡದ ಮಹಿಮೆ ಅರ್ಥವಾಯಿತು. ಕನ್ನಡ ಅದರಲ್ಲಿರುವ ಅಕ್ಷರಗಳಷ್ಟೇ ಅರ್ಥಪರ‍್ಣವಾದ ಭಾಷೆಯಾಗಿದೆ. ಸಾಹಿತಿಗಳು ಈಗಾಗಲೇ ತಿಳಿಸಿರುವ ವಿಚಾರಗಳನ್ನು ಮುಂದಿನ ಪೀಳಿಗೆಗೂ ತಿಳಿಸಬೇಕಾಗಿದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪಾಲ್ಗೊಂಡಿದ್ದು, ಜಿಲ್ಲೆಯಾದ್ಯಂತ ಯುವ ಸಮೂಹ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸದ್ಯ ಪಡೆದವರ ಸಂಖ್ಯ ಕಡಿಮೆಯಾಗಿದ್ದು, ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಸಂಚಾಲಕ ರಾಜಶ್ರೀ ಎಸ್. ನಟ್ಟೋಜ ದಂಪತಿ ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಹೆಚ್. ಜಿ. ದಂಪತಿಯನ್ನು ಗೌರವಿಸಿದರು. ವೇದಿಕೆಯಲ್ಲಿ ಜಿಲ್ಲಾ ಕ.ಸಾ.ಪ ಗೌರವ ಕೋಶಾಧ್ಯಕ್ಷ ಐತ್ತಪ್ಪ ನಾಯ್ಕ್ ಬಿ, ಕ.ಸಾ.ಪ ಉಳ್ಳಾಲ ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ, ತಾಲೂಕು ಕ.ಸಾ.ಪ ಗೌರ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ.ಹರ್ಷಕುಮಾರ್ ರೈ, ಸದಸ್ಯರಾದ ಆಶಾ ಬೆಳ್ಳಾರೆ, ಕುಂಬ್ರ ದುರ್ಗಾಪ್ರಸಾದ್ ರೈ, ಕುಸುಮ್ ರಾಜ್, ಡಾ.ವಿಜಯ ಕುಮಾರ್ ಮೊಳೆಯಾರ, ಹಾಜಿ ಅಬೂಬಕ್ಕರ್ ಆರ್ಲಪದವು, ಬಾಬು ಎಂ, ಯಶಸ್ವಿನಿ, ಯು.ಎಲ್.ಉದಯಕುಮಾರ್, ಶಾಂತಾ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಸ್ವಾಗತಿಸಿದರು. ಕ.ಸಾ.ಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ವಂದಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯ ಶಿಕ್ಷಕಿ ಮಲ್ಲಿಕಾ ಸ್ವರಚಿತ ಕವನ ವಾಚಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು