News Karnataka Kannada
Sunday, April 28 2024
ಕ್ಯಾಂಪಸ್

ವಿಶ್ವ ಶಾಂತಿ, ಸಮಾನತೆ, ಸಾಮರಸ್ಯ, ಸಮಾಜ ನಿರ್ಮಾಣಕ್ಕಾಗಿ ಕೈಜೋಡಿಸಿ: ಥಾವರಚಂದ ಗೆಹ್ಲೋಟ್

Join hands to build world peace, equality, harmony, society: Thaawarchand Gehlot
Photo Credit : News Kannada

ಧಾರವಾಡ: ಹಲವಾರು ದಶಕಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ರಾಜ್ಯದ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದೆ. ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಸಾಹಿತಿಗಳನ್ನು, ಬರಹಗಾರರನ್ನು, ಶಿಕ್ಷಣ ಪ್ರೇಮಿಗಳನ್ನು, ಸಮಾಜ ಸುಧಾರಕರನ್ನು, ಸಂಗೀತಗಾರರನ್ನು ನೀಡಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಭವನದಲ್ಲಿ 73ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿಗಳನ್ನು ವಿತರಿಸಿ, ಅವರು ಮಾತನಾಡಿದರು.

ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ, ವಸುಧೈವ ಕುಟುಂಬಕಂ ತತ್ವಶಾಸ್ತ್ರ ಮತ್ತು ಧ್ಯಾನವನ್ನು ಕೇಂದ್ರೀಕರಿಸುತ್ತದೆ. ಇದು ವಿಶ್ವ ಸಹೋದರತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಕರ್ನಾಟಕ ರಾಜ್ಯವು ದೇಶದ ಪ್ರಗತಿಪರ ರಾಜ್ಯವಾಗಿದ್ದು, ಹುಬ್ಬಳ್ಳಿ-ಧಾರವಾಡವು ರಾಜ್ಯದ ಸಾಂಸ್ಕತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ, ಧಾರವಾಡವು ಜಗತ್ತಿಗೆ ಅನೇಕ ರತ್ನಗಳನ್ನು ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯವು ರಾಜ್ಯದ ಎರಡನೇ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈ ವಿಶ್ವವಿದ್ಯಾಲಯ ಹಲವು ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

ಜೀವನದ ಯಶಸ್ಸಿನಲ್ಲಿ ಶಿಕ್ಷಣವು ಬಹುದೊಡ್ಡ ಕೊಡುಗೆಯನ್ನು ಹೊಂದಿದೆ, ಶಿಕ್ಷಣವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉಪಯುಕ್ತವಾಗಿದೆ, ಒಬ್ಬ ವ್ಯಕ್ತಿಯು ಶಿಕ್ಷಣ ಪಡೆದಾಗ ಮಾತ್ರ ಅವನ ಅಭಿವೃದ್ಧಿಯಾಗುತ್ತದೆ. ಪ್ರಸ್ತುತ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಅವಶ್ಯಕತೆಯಿದೆ. ಇಂದು ಜಗತ್ತಿನಲ್ಲಿ ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡಲು ನಾವೀನ್ಯತೆ ಮತ್ತು ಉದ್ಯಮಶೀಲತಾ ಕಡೆಗೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಈ ದೇಶದ ಸಾಂಸ್ಕತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ವಿಶ್ವವಿದ್ಯಾಲಯ ನಿರಂತರವಾಗಿ ಮಾಡಿದೆ. ಈಗಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಆತ್ಮನಿರ್ಭರ ಭಾರತ ನಿರ್ಮಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ದೇಶದ ಜ್ಞಾನ, ಸಂಸ್ಕøತಿ, ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ. ಅನಾದಿಕಾಲದಿಂದಲೂ ಈ ದೇಶದಲ್ಲಿ ಜ್ಞಾನದ ಪ್ರಸಾರ ಮಾಡಲಾಗುತ್ತಿದೆ, ಸಿಂಧೂ ನಾಗರಿಕತೆ, ನಳಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳು ಇದಕ್ಕೆ ಉದಾಹರಣೆಯಾಗಿವೆ. ಭೌತಿಕ ಸಂಪತ್ತಿಗಿಂತ ಜ್ಞಾನದ ಸಂಪತ್ತು ಅತಿ ಮುಖ್ಯ. ಯುವಕರು ಈ ದೇಶದ ಪ್ರಗತಿಯಲ್ಲಿ ಪಾಲ್ಗೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಭಾರತವು ಈಗ ವಿಶ್ವದ 5ನೇ ಆರ್ಥಿಕ ರಾಷ್ಟ್ರವಾಗಿದೆ. ಸದೃಢ ರಾಷ್ಟ್ರ ನಿರ್ಮಾಣ, ಪರಿಸರ ನಿಸರ್ಗ ಸಂಪತ್ತು ಸಂರಕ್ಷಣೆಯಲ್ಲಿ ಯುವಕರು ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ. ಸುಧಾಕರ್ ಅವರು ಅತಿಥಿಗಳಾಗಿ ಮಾತನಾಡಿ, ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲೊಂದಾದ ಕರ್ನಾಟಕ ವಿಶ್ವವಿದ್ಯಾಲಯವು ಶಿಕ್ಷಣ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಾಕಷ್ಟು ರೀತಿಯ ಕೊಡುಗೆಗಳನ್ನು ನೀಡಿ, ರಾಜ್ಯದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದೆ. ಯುವ ಪೀಳಿಗೆಯು ಈ ದೇಶದ ಆಸ್ತಿ, ಕಠಿಣ ಪರಿಶ್ರಮ ಶ್ರದ್ಧೆಯಿಂದ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ಪ್ರಗತಿಯಲ್ಲಿ ಪಾಲ್ಗೊಳ್ಳಬೇಕು. ಉನ್ನತ ಶಿಕ್ಷಣದ ಸಂಶೋಧನೆಯಲ್ಲಿ ಪಾಲ್ಗೊಂಡು ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕರಿಸಬೇಕೆಂದು ಹೇಳಿದರು.

ಆಧುನಿಕ ಜ್ಞಾನ-ವಿಜ್ಞಾನದಿಂದ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಬೆಳವಣಿಗೆಯಾಗುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯ ಹಲವಾರು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಯಶಸ್ಸು ಕಾಣಲಿದೆ ಎಂದು ಸಚಿವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರಮೋಷನ್ ಆಫ್ ಅಡ್ವಾನ್ಸ್ಡ್ ರಿಸರ್ಚ್ ನವದೆಹಲಿಯ ನಿರ್ದೇಶಕರಾದ ಪ್ರೋ. ನಿತಿನ್ ಸೇಠ್ ಅವರು ಮಾತನಾಡಿ, ಮಹತ್ವಾಕಾಂಕ್ಷೆಯ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸುತ್ತಾರೆ ಎನ್ನುವ ವಿಶ್ವಾಸವಿದೆ. ಮೇಕ್-ಇನ್-ಇಂಡಿಯಾ ನಿಂದ ಮೇಡ್-ಬೈ-ಇಂಡಿಯಾ ಗೆ ಭಾರತದ ಪರಿವರ್ತನೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕೆಂದು ಅಭಿಪ್ರಾಯಪಟ್ಟರು. ಘಟಿಕೋತ್ಸವ ಸಮಾರಂಭವು ಶೈಕ್ಷಣಿಕ ಜಗತ್ತಿನಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಇದು ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಪೆÇೀಷಕರು, ಕುಟುಂಬ ಮತ್ತು ಶಿಕ್ಷಕರಿಗೂ ಸಹ ಪ್ರತಿಯೊಬ್ಬರಿಗೂ ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪರಕಾಷ್ಟೆಯನ್ನು ಸಂಕೇತಿಸುತ್ತದೆ. ಇದು ಸಂಭ್ರಮಾಚರಣೆ, ಮನ್ನಣೆ ಮತ್ತು ಸಾಧನೆಯ ಕ್ಷಣವಾಗಿದೆ ಎಂದರು.

ನಾವು ಹೆಮ್ಮೆಪಡುವ ವಿದ್ಯಾರ್ಥಿಗಳು ಸೇರಿದಂತೆ ರೈತರು, ಶಿಕ್ಷಕರು, ವೈದ್ಯರು, ವಿಜ್ಞಾನಿಗಳು ತಮ್ಮ ಜ್ಞಾನ, ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನಗಳು ನಿಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತವೆ ಎಂಬುದನ್ನು ಲೆಕ್ಕಿಸದೆ, ಜೀವನದಲ್ಲಿ ಉದಾರ ಮತ್ತು ಗೌರವಾನ್ವಿತರಾಗಿರಲು ಮರೆಯದಿರಿ. ಈ ರಾಷ್ಟ್ರದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನಿಮ್ಮ ಹೆಜ್ಜೆಯನ್ನು ಇರಿಸಿ, ನಿಮ್ಮ ವಿಶ್ವವಿದ್ಯಾಲಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರಬೇಕು. ಯಶಸ್ಸು ಮತ್ತು ವೈಫಲ್ಯದ ಬಾಂಧವ್ಯವನ್ನು ತ್ಯಜಿಸಿ, ನಿಮ್ಮ ಕರ್ತವ್ಯ ನಿರ್ವಹಣೆಯಲ್ಲಿ ದೃಢವಾಗಿರಿ. ಅಂತಹ ಸಮಚಿತ್ತತೆಯನ್ನು ಯೋಗ ಎಂದು ಕರೆಯಲಾಗುತ್ತದೆ. ಇದರರ್ಥ ನಿಜವಾದ ಯೋಗವು ಶಾಂತ ಮತ್ತು ಸಮತೋಲನ ಮನಸ್ಸಿನಿಂದ ನಿಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದರು.

ವಿದ್ಯಾರ್ಥಿ ಜೀವನದಿಂದ ವೃತ್ತಿಪರ ಜಗತ್ತಿಗೆ ಪರಿವರ್ತನೆಯನ್ನು ಗುರುತಿಸುತ್ತದೆ. ನಿಮ್ಮ ಕುಟುಂಬ, ವಿಶ್ವವಿದ್ಯಾಲಯದ ಮತ್ತು ಶಿಕ್ಷಕರ ಶ್ರಮವು ನಿಮ್ಮ ಸಾಧನೆಗಳನ್ನು ಗುರುತಿಸುವಲ್ಲಿ ಈ ದಿನ ಬಂದಿದೆ ಎಂದು ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಹೆಮ್ಮೆಪಡುತ್ತಾರೆ ಎಂದು ನನಗೆ ಖಾತ್ರಿಯಿದೆ. ನಿಮ್ಮ ಈ ಮೊದಲ ದೊಡ್ಡ ಮೈಲಿಗಲ್ಲು ಪರಿಪೂರ್ಣ ಸಮಯದಲ್ಲಿದೆ. ಭಾರತದ ಆರ್ಥಿಕತೆಯಂತ ಧಾಪುಗಾಲು ಹಾಕುತ್ತದೆ ಎಂದರು.

ಕ.ವಿ.ವಿ.ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಕೌನ್ಸಿಲ್ ಸದಸ್ಯರು, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅರವಿಂದ ಜತ್ತಿ, ಅರ್ಚನಾ ಸುರಾನಾ ಮತ್ತು ರವಿಶಂಕರ್ ಭೂಪಳಾಪುರ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪಿ.ಎಚ್.ಡಿ. ಪದವಿಯನ್ನು ಪ್ರಧಾನ ಮಾಡಲಾಯಿತು.

ಇಂದಿನ ಘಟಕೋತ್ಸವದಲ್ಲಿ 147 ಚಿನ್ನದ ಪದಕಗಳನ್ನು 265 ಪಿಎಚ್‍ಡಿ ಪದವಿಗಳನ್ನು ವಿತರಿಸಲಾಯಿತು. ಕನ್ನಡ ಅಧ್ಯಯನ ಕೇಂದ್ರದ ನೇಹಾ ಸಜಲಿ ಹಾಗೂ ಸಮೂಹ ಸಂವಹನ ಪತ್ರಿಕೋದ್ಯಮ ವಿಭಾಗದ ದಾದಾಗೌಡ ಪಾಟೀಲ್ ತಲಾ 9 ಚಿನ್ನದ ಪದಕಗಳನ್ನು ಪಡೆದುಕೊಂಡರು. ಜೀವರಸಾಯನ ಶಾಸ್ತ್ರದ ಶುಭ ಲಕ್ಷ್ಮೀನಾರಾಯಣ ಹೆಗಡೆ, ಪ್ರಾಣಿ ಶಾಸ್ತ್ರದ ಎಂ.ಪಿ. ಪವನ್‍ಕುಮಾರ್ ಹಾಗೂ ಗ್ರಂಥಾಲಯ ವಿಭಾಗದ ಸೌಮ್ಯ ಬ್ಯಾಡಗಿ ತಲಾ 8 ಚಿನ್ನದ ಪದಕಗಳನ್ನು ಹಾಗೂ ರಸಾಯನ ಶಾಸ್ತ್ರ ವಿಭಾಗದ ಶ್ರೇಯಾ. ಯು. ಪ್ರಭು 7 ಚಿನ್ನದ ಪದಕಗಳನ್ನು ಪಡೆದುಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು