News Karnataka Kannada
Sunday, April 28 2024
ಕ್ಯಾಂಪಸ್

ತಾಂತ್ರಿಕತೆಗಿಂತ ಮನುಷ್ಯ ಸಾಮರ್ಥ್ಯ ಮಿಗಿಲು: ಡಾ.ಬಿ.ಎ.ಕುಮಾರ ಹೆಗ್ಡೆ

ಮನುಷ್ಯನ ಗ್ರಹಿಕೆಯ ಸಾಮರ್ಥ್ಯ ಮತ್ತು ಆಳವಾದ ಜ್ಞಾನದ ಶಕ್ತಿಯನ್ನು ಯಾಂತ್ರಿಕ ಬುದ್ಧಿಮತ್ತೆಯೂ ಸೇರಿದಂತೆ ತಂತ್ರಜ್ಞಾನದ ಯಾವ ಆವಿಷ್ಕಾರಗಳೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
Photo Credit : News Kannada

ಉಜಿರೆ: ಮನುಷ್ಯನ ಗ್ರಹಿಕೆಯ ಸಾಮರ್ಥ್ಯ ಮತ್ತು ಆಳವಾದ ಜ್ಞಾನದ ಶಕ್ತಿಯನ್ನುಯಾಂತ್ರಿಕ ಬುದ್ಧಿಮತ್ತೆಯೂ ಸೇರಿದಂತೆ ತಂತ್ರಜ್ಞಾನದ ಯಾವ ಆವಿಷ್ಕಾರಗಳೂ ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಎಸ್ ಡಿ ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.

ಅವರು ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ (ಎನ್‌ಐಪಿಎಮ್) ಸಹಯೋಗದೊಂದಿಗೆ ಎನ್‌ಐಪಿಎಮ್‌ನ ವಿದ್ಯಾರ್ಥಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ ಯಾಂತ್ರಿಕ ಬುದ್ಧಿಮತ್ತೆಯ ಪ್ರಭಾವ ಹೆಚ್ಚಿದ್ದರೂ ಮನುಷ್ಯನ ಸಾಮರ್ಥ್ಯಕ್ಕೆ ಸರಿಸಾಟಿಯಾಗಿ ನಿಲ್ಲುವುದಕ್ಕಾಗದು. ಭಾವನೆ, ಬೌದ್ಧಿಕತೆ ಮತ್ತು ಮನೋಸಂಕಲ್ಪದ ನೆಲೆಯಲ್ಲಿ ಮನುಷ್ಯನ ಶಕ್ತಿಗೆ ವಿಶೇಷ ಆದ್ಯತೆ ಇದೆ. ತಂತ್ರಜ್ಞಾನ ಮನುಷ್ಯನ ಸಾಮರ್ಥ್ಯದ ಆಧಾರದಲ್ಲಿ ರೂಪುಗೊಳ್ಳುತ್ತದೆ. ಈ ದೃಷ್ಟಿಯಿಂದ ಈಗ ಹೊಸ ಟ್ರೆಂಡ್ ಆಗಿ ಗಮನಸೆಳೆದಿರುವ ಯಾಂತ್ರಿಕ ಬುದ್ಧಿಮತ್ತೆಯೂ ಮನುಷ್ಯನ ಸೃಜನಶೀಲತೆಯ ಭಾಗವೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಕೃತಕಬುದ್ಧಿಮತ್ತೆಯು ಮಾನವನ ಕಾರ್ಯಕ್ಷೇತ್ರಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ  ಸಂಚಲನ ಮೂಡಿಸುತ್ತಿದ್ದರೂ ಮಾನವನ ವಿಶೇಷ ಸಾಮರ್ಥ್ಯವಾದ ಭಾವನಾತ್ಮಕ ಅಂಶ ಹಾಗೂ ಮನೋಬಲವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ನಿರಂತರ ಓದಿನಿಂದ ಪಡೆದ ಆಳವಾದ ಜ್ಞಾನ ಮತ್ತು ರೂಢಿಸಿಕೊಳ್ಳುವ ಗ್ರಹಿಕೆಯ ಸಾಮರ್ಥ್ಯವು ಮನುಷ್ಯನನ್ನು ವಿಭಿನ್ನವಾಗಿಸುತ್ತದೆ. ತಂತ್ರಜ್ಞಾನವನ್ನೂ ಮೀರಿಸಬಲ್ಲ ಶಕ್ತಿ ರೂಪುಗೊಳ್ಳುತ್ತದೆ. ಹೀಗಾಗಿಯೇ ಮನುಷ್ಯ ಸಾಮರ್ಥ್ಯವು ತಾಂತ್ರಿಕತೆಯನ್ನು ಮೀರಿಸಬಲ್ಲ ಗುಣಲಕ್ಷಣವನ್ನು ಹೊಂದಿರುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ತಂತ್ರಜ್ಞಾನದ ಆಯಾಮಗಳನ್ನು  ತಿಳಿದುಕೊಂಡು ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ವೃತ್ತಿಪರ ಸಾಮರ್ಥ್ಯವನ್ನು ನವೀಕರಿಸಿಕೊಳ್ಳಬೇಕು. ಹಾಗಾದಾಗ ಮಾತ್ರ ಸ್ಪರ್ಧಾತ್ಮಕ ಜಗತ್ತನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.

ಸ್ವಯಂ ಜಾಗೃತಿ ಮತ್ತು ಸ್ವಯಂ ನಿಯಂತ್ರಣದ ಪ್ರಜ್ಞೆಯು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕ.  ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಕೊರತೆಗಳ ಆತ್ಮಾವಲೋಕನ ಮಾಡಿ ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಮಂಗಳೂರಿನ ಎನ್‌ಐಪಿಎಮ್ ವಿದ್ಯಾರ್ಥಿ ಘಟಕದ ಕಾರ್ಯದರ್ಶಿ ಡಾ.ಲಕ್ಷೀಶ್ ರೈ ಎನ್‌ಐಪಿಎಂ ವಿದ್ಯಾರ್ಥಿ ಘಟಕ ಸ್ಥಾಪನೆಯ ಆಶಯವನ್ನು ಪ್ರಸ್ತುತಪಡಿಸಿದರು. ವ್ಯಕ್ತಿತ್ವ ಬೆಳವಣಿಗೆಗೆ ಸಹಾಯಕವಾಗುವ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿಕೊಡುವ ಉದ್ದೇಶದೊಂದಿಗೆ ಎನ್‌ಐಪಿಎಂ ಘಟಕವು ಕಾರ್ಯನಿರ್ವಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಿಆರ್‌ಎ ಸಲ್ಯೂಷನ್ ಕಾಯನಿರ್ವಾಹಕ ನಿರ್ದೇಶಕ ಡಾ ರೊನಾಲ್ಡ್ ಸಿಕ್ವೆರಾ, ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಉಪಸ್ಥಿತರಿದ್ದರು. ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿನಿ ಅಮೃತ್ ಸಿ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ರವಿಶಂಕರ್ ಕೆ.ಆರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಅತುಲ್.ಎಸ್.ಸೆಮಿತಾ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು