News Karnataka Kannada
Wednesday, May 08 2024
ಮಂಗಳೂರು

ಭಾರತದ ದೇಶೀ ಜ್ಞಾನದ ದಾಖಲೀಕರಣ ಅಗತ್ಯ- ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

Documentation of India's indigenous knowledge is necessary- Prof. P. Subramanya Yadapaditthaya
Photo Credit : News Kannada

ಉಜಿರೆ, ಮಾ.31: ಭಾರತದ ದೇಶೀಯ ಜ್ಞಾನ- ಸಾಂಪ್ರದಾಯಿಕ ಜ್ಞಾನದ ದಾಖಲೀಕರಣವಾಗಿ, ಅದು ಒಪ್ಪಿತಗೊಂಡು ಸದುದ್ದೇಶಕ್ಕೆ ಸರಿಯಾದ ರೀತಿಯಲ್ಲಿ ಬಳಸಲ್ಪಡಬೇಕಿದೆ. ದೇಶೀಯ ತಾಂತ್ರಿಕ ಜ್ಞಾನ ಕೂಡ ದಾಖಲೀಕರಣಗೊಂಡು ದೇಶದ ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಸಂಯೋಜಿಸಲ್ಪಡುವ ಅಗತ್ಯವಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಮೂಲಕ ಸಾಧಿತವಾಗುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.

ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಮಾ.30ರಂದು ಅವರು ‘ಇಂಡೀಜಿನಸ್ ಪ್ರಾಕ್ಟೀಸಸ್ ಇನ್ ಹೈಯರ್ ಎಜುಕೇಶನ್ ಇನ್ ಇಂಡಿಯಾ: ಸ್ಟೆಪ್ಸ್ ಅಹೆಡ್’ ರಾಷ್ಟ್ರೀಯ ಸೆಮಿನಾರ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗವು ನವದೆಹಲಿಯ ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷದ್ ಸಹಯೋಗ ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ಸೋಶಲ್ ಸೈನ್ಸ್ ರಿಸರ್ಚ್ (ಐಸಿಎಸ್ಎಸ್ಆರ್) ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು.

ಭಾರತೀಯ ದೇಶೀ ಶಿಕ್ಷಣ ಪದ್ಧತಿಯಲ್ಲಿ ದಾಖಲೀಕರಣ ತುಂಬ ದುರ್ಬಲವಾಗಿದೆ. ಪ್ರಶ್ನಿಸುವ ಮನೋಭಾವ, ಆತ್ಮಶೋಧನೆಯನ್ನು ಕಲಿಸುತ್ತಿದ್ದ ಭಾರತೀಯ ಶಿಕ್ಷಣ ಪದ್ಧತಿಯು ಮೆಕಾಲೆ ಶಿಕ್ಷಣ ಪದ್ಧತಿ ಬಂದ ಬಳಿಕ ಬದಿಗೆ ಸರಿಯಿತು. ಭಾರತದ ಪ್ರಯೋಗ ಆಧಾರಿತ, ಕೌಶಲ ಆಧಾರಿತ, ಆನ್ವಯಿಕತೆ ಆಧಾರಿತ ಜ್ಞಾನ ಪರಂಪರೆಯು ಮೆಕಾಲೆಯ ಕಂಠಪಾಠ ಆಧಾರಿತ ಶಿಕ್ಷಣ ಪದ್ಧತಿಯಿಂದ ಮರೆಯಾಯಿತು. ಭಾರತೀಯ ಜ್ಞಾನ ಪರಂಪರೆಯನ್ನು ಕೀಳು ಎಂಬಂತೆ ತಿಳಿಯಲಾಯಿತು. ಹಾಗಾಗಿ ದೇಶೀಯ ಜ್ಞಾನದ ದಾಖಲೀಕರಣ ಮತ್ತು ಬಳಕೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಇಂದು ದೇಶದಲ್ಲಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ಮಂಡಳಿ (ಎನ್ಎಸ್ಡಿಸಿ) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಭಾರತೀಯ ಶಿಕ್ಷಣ ಪದ್ಧತಿಯು ಜನರ ಅರ್ಥಪೂರ್ಣ ಅಸ್ತಿತ್ವಕ್ಕೆ ಪ್ರಮುಖ ಮೌಲ್ಯಗಳನ್ನು ಒದಗಿಸುತ್ತದೆ. ಉನ್ನತ ಶಿಕ್ಷಣವು ಚಾರಿತ್ರ್ಯ ನಿರ್ಮಾಣಕ್ಕೆ ಒತ್ತು ನೀಡಬೇಕು. ಎನ್ಇಪಿ ರಾಷ್ಟ್ರ ಮೊದಲು ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ. ಚಾರಿತ್ರ್ಯ ನಿರ್ಮಾಣಕ್ಕೆ ಅವಕಾಶ ಕೊಡುತ್ತದೆ ಎಂದು ಅವರು ತಿಳಿಸಿದರು.

“ಮಾತೃಭೂಮಿ, ಮಾತೃಸಂಸ್ಥೆ, ಮಾತೃಭಾಷೆ, ಗೋಮಾತೆ ಇವುಗಳನ್ನು ಗೌರವಿಸುವ ಬಗ್ಗೆ ಹಾಗೂ ಭಾರತೀಯ ಸಂಸ್ಕೃತಿ, ಆಚರಣೆ, ಮೂಲನಂಬಿಕೆ, ನೈತಿಕ ಮೌಲ್ಯ ಇತ್ಯಾದಿ ವಿಚಾರಗಳು ಉನ್ನತ ಶಿಕ್ಷಣದಲ್ಲಿ ಅಳವಡಿಸಲ್ಪಡಲಿವೆ. ಪಠ್ಯವಿಷಯಗಳು ಮಾತೃಭಾಷೆಯಲ್ಲಿ ಮುದ್ರಿಸಲ್ಪಡಲಿವೆ. ಆದರೆ ಕಂಪ್ಯೂಟರ್ ಸೈನ್ಸ್, ಮೆಡಿಸಿನ್, ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಇದು ಸವಾಲು. ಆದರೆ ನಾವು ಒಬ್ಬ ಕಲಿಕಾರ್ಥಿಗೆ ಇಂಗ್ಲಿಷ್ ಮಾಧ್ಯಮದಲ್ಲಿಯೇ ಕಲಿಯುವಂತೆ ಕಡ್ಡಾಯಗೊಳಿಸುವಂತಿಲ್ಲ. ಹಾಗಾಗಿ ಸೌಲಭ್ಯಗಳನ್ನು ಸೃಜಿಸಬೇಕಿದೆ” ಎಂದರು.

ಇಂದು ಸಂಶೋಧನೆ ಮಾಡುವುದು ಫ್ಯಾಷನ್ ಆಗಿದೆ. ಸ್ವಯಂಸ್ಫೂರ್ತಿಯಿಂದ ಮಾಡುವುದಕ್ಕಿಂತಲೂ ಕಡ್ಡಾಯವಾಗಿರುವುದರಿಂದ ಮಾಡುವುದು ಎಂಬಂತಾಗಿದೆ. ಯಶಸ್ಸು ಸಿಗುವವರೆಗೂ ಓದಬೇಕು ಎಂಬ ಮನೋಭಾವ ಯುವಜನರಲ್ಲಿ ಇಂದು ಇಲ್ಲವಾಗಿರುವುದು ದುರದೃಷ್ಟ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ವ್ಯಕ್ತಿ ಕೇವಲ ವಿದ್ಯಾವಂತನಾಗದೆ ಬುದ್ಧಿವಂತ, ಪ್ರಜ್ಞಾವಂತ ನಾಗರಿಕನಾಗಬೇಕು. ಆದರೆ ಅದು ಆಗುತ್ತಿಲ್ಲ. ಅದಕ್ಕೆ ಕಾರಣ ಕೆಲವು ಕೊರತೆಗಳು. ಅದಕ್ಕೆ ಉತ್ತರ ನಮ್ಮ ಹಿಂದಿನ ಜೀವನ ಕ್ರಮ ಹಾಗೂ ಶಿಕ್ಷಣ ಪದ್ಧತಿಯಲ್ಲಿದೆ. ಆದರೆ ಭಾರತೀಯ ಪರಂಪರೆಯನ್ನು ಪಾಲಿಸುವಲ್ಲಿ ಮನಃಸ್ಥಿತಿಯೇ ಸವಾಲಾಗಿದೆ. ಅದು ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಲ್ಲಿ ಕೂಡ ಇರಬಹುದು. ಯುವಜನರಿಗೆ ಸ್ಫೂರ್ತಿ ನೀಡಲು ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಹಾಗಾಗಿ, ವಿಶೇಷವಾಗಿ, ಶಿಕ್ಷಕರು ಈ ಎಲ್ಲ ಗುಣಗಳನ್ನು ಬೆಳೆಸಿಕೊಳ್ಳಬೇಕು.

– ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ

ಅಧ್ಯಕ್ಷತೆ ವಹಿಸಿದ್ದ ಒಡಿಷಾದ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ವಿ. ಕೃಷ್ಣ ಭಟ್ಟ ಮಾತನಾಡಿ,“ನಾವು ನಮ್ಮ ಸಮಾಜವನ್ನು ನಮ್ಮ‌ ಕಣ್ಣುಗಳ ಮೂಲಕ ನೋಡುವ ಬದಲು ಪಾಶ್ಚಿಮಾತ್ಯ ದೃಷ್ಟಿಕೋನದಿಂದ ನೋಡುತ್ತಿದ್ದೇವೆ.‌ ಪ್ರಸ್ತುತ ಶಿಕ್ಷಣ ಪದ್ಧತಿ ಕೂಡ ಅದೇ ರೀತಿಯಲ್ಲಿ ಸಾಗಿ ಬಂದಿದೆ. ಇದು ಬದಲಾಗುವುದು ಅಗತ್ಯ” ಎಂದರು.

ಅತಿಥಿ, ನವದೆಹಲಿಯ ಐಸಿಎಸ್ಎಸ್ಆರ್ ಸದಸ್ಯೆ ಹಾಗೂ ಇಂಡಿಯಾ ಪಾಲಿಸಿ ಫೌಂಡೇಶನ್ ಅಧ್ಯಕ್ಷೆ ಪ್ರೊ. ಶೀಲಾ ರೈ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯ ಕುಮಾರ್ ಶೆಟ್ಟಿ, ಸೆಮಿನಾರ್ ಸಂಯೋಜಕ, ತುಮಕೂರು ವಿಶ್ವವಿದ್ಯಾನಿಲಯದ ನಿರ್ದೇಶಕ (ಸಂಶೋಧನೆ) ಡಾ. ರಮೇಶ್ ಸಾಲಿಯಾನ್ ಉಪಸ್ಥಿತರಿದ್ದರು. ಗಣ್ಯರನ್ನು ಸಮ್ಮಾನಿಸಲಾಯಿತು.

ಸೆಮಿನಾರ್ ಸಂಘಟನಾ ಕಾರ್ಯದರ್ಶಿ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗಣರಾಜ್ ಕೆ. ವಂದಿಸಿದರು. ಪ್ರಾಧ್ಯಾಪಕ ಡಾ. ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು