ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ವಿರೋಧಿಸಿ ‘ಖಾಲಿ ಟ್ರಂಕ್’ ಪ್ರತಿಭಟನೆ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದರು.

ಮೆಟ್ರೋ ನಿಲ್ದಾಣದಲ್ಲಿ ಪೂರ್ವಾನುಮತಿ ಪಡೆಯದೆ ರವಿವಾರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದರ ನಡುವೆಯೂ ಸೋಮವಾರ ಮತ್ತೆ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಮತ್ತೆ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಬಂಧನಕ್ಕೂ ಮುನ್ನ ಆರ್ವಿ ರಸ್ತೆ ಮೆಟ್ರೋ ನಿಲ್ದಾಣದ ಹೊರಭಾಗದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, “ಕೇಂದ್ರ ಸರಕಾರದ ಒತ್ತಡದಿಂದಾಗಿ ಮೆಟ್ರೋ ದರ ಏರಿಕೆಯನ್ನು ಎರಡನೇ ಬಾರಿಗೆ ತಡೆಹಿಡಿಯಲಾಗಿದೆ. ರಾಜ್ಯ ಸರಕಾರ ತನ್ನ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.