ಬೆಂಗಳೂರು: ಪ್ರಯಾಣಿಕರೊಬ್ಬರು ‌ಕಳೆದುಕೊಂಡಿದ್ದ ಸುಮಾರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್‌ನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪತ್ತೆಹಚ್ಚಿ ವಾಪಸ್ ನೀಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಫೆಬ್ರವರಿ 8ರಂದು ರಾತ್ರಿ 8.35ಕ್ಕೆ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕ ತಮ್ಮ ಕೆಂಪು ಬಣ್ಣದ ಟ್ರ್ಯಾಲಿ ಬ್ಯಾಗ್ ಕಳೆದುಕೊಂಡಿದ್ದರು. ಬಳಿಕ ಈ ಕುರಿತು ತಕ್ಷಣವೇ ‘ರೈಲ್ ಮದದ್’ ಪೋರ್ಟಲ್‌ನಲ್ಲಿ ದೂರು ಕೂಡ ದಾಖಲಿಸಿದ್ದರು.

ದೂರು ಸ್ವೀಕರಿಸಿದ ಕೂಡಲೇ RPF ಸಿಬ್ಬಂದಿ ತ್ವರಿತವಾಗಿ ಕಾರ್ಯಪ್ರವೃತ್ತರಾಗಿ ಯಲಹಂಕ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್–1ರಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಯಲಹಂಕ ನಿಲ್ದಾಣದ RPF ಪೋಸ್ಟ್‌ಗೆ ತೆಗೆದುಕೊಂಡು ಬಂದಿದ್ದಾರೆ.

ಇನ್ನು ಬ್ಯಾಗ್ ಪರಿಶೀಲನೆ ವೇಳೆ ಅದರೊಳಗೆ ಸುಮಾರು 17 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣಗಳು ಹಾಗೂ 2 ಲಕ್ಷ ರೂ. ನಗದು ಇರುವುದು ಪತ್ತೆಯಾಗಿದೆ. ನಂತರ ರೈಲ್ ಮದದ್​​ನಲ್ಲಿ ಉಲ್ಲೇಖವಾದ ದೂರು ಹಾಗೂ ಆಧಾರ್ ಕಾರ್ಡ್ ವಿವರಗಳನ್ನು ಪಡೆದು RPF ಸಿಬ್ಬಂದಿ ಬ್ಯಾಗ್ ಕಳೆದುಕೊಂಡ ಪ್ರಯಾಣಿಕನನ್ನು ಸಂಪರ್ಕಿಸಿದ್ದಾರೆ. ಬಳಿಕ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಟ್ರಾಲಿ ಬ್ಯಾಗ್‌ನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.