ನಂಜನಗೂಡು: ಮಾರ್ಚ್ 30 ರಂದು ನಂಜನಗೂಡಿನಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಆಗದಂತೆ ಕಟ್ಟುನಿಟ್ಟಾಗಿ ಬ್ಯಾರಿಕೆಡ್ ಗಳನ್ನು ಅಳವಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂಜನಗೂಡು ನಗರದ ಶ್ರೀ ನಂಜುಂಡೇಶ್ವರಸ್ವಾಮಿ ದಾಸೋಹ ಭವನದ ಕಛೇರಿಯಲ್ಲಿ ನಂಜನಗೂಡು ದೊಡ್ಡಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಮಾ. 30ರಂದು ನಡೆಯುವ ಗೌತಮ ಪಂಚ ಮಹಾ ರಥೋತ್ಸವ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ವರ್ಷವೂ ಕೂಡ ಮೂರು ಬಾರಿ ಮೂರು ಬಾರಿ ಸಭೆ ನಡೆಸಲಾಗಿತ್ತು.
ಇಂದು ಮೊದಲ ಸಭೆಯನ್ನು ಆಯೋಜನೆ ಮಾಡಲಾಗಿದೆ. ಕಳೆದ ವರ್ಷ ದೊಡ್ಡ ಜಾತ್ರೆ ಅದ್ದೂರಿಯಾಗಿ ಯಶಸ್ವಿಯಾಗಿ ನೆರವೇರಿತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳು ಸಹಕಾರ ನೀಡಬೇಕು. ದೇವಸ್ಥಾನದ ಅಂಡರ್ ಪಾಸ್ ರಸ್ತೆ ಜಾತ್ರೆ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರತಿದಿನವೂ ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು.
ಲೋಕೋಪಯೋಗಿ ಇಲಾಖೆ ರಥಗಳ ಫಿಟ್ನೆಸ್ ಸರಿಯಾಗಿ ನೋಡಿಕೊಳ್ಳಬೇಕು. ಪ್ರಸಾದ ವಿತರಿಸುವ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಗಲೀಜು ಆಗದಂತೆ ನೋಡಿಕೊಳ್ಳಬೇಕು. ಲಕ್ಷಾಂತರ ಜನ ಸೇರುವ ಸಂದರ್ಭದಲ್ಲಿ ಅಹಿತಕರ ಘಟನೆಗಳು ಆಗದಂತೆ ಜಾಗೃತಿ ವಹಿಸಬೇಕು. ನೀರಾವರಿ ಇಲಾಖೆ ನದಿ ಸ್ವಚ್ಛತೆಗೆ ಗಮನಹರಿಸಬೇಕು. ರಾಜ್ಯ ಸೇರಿದಂತೆ ಹೊರ ಭಾಗಗಳಿಂದಲೂ ಹೆಚ್ಚಿನ ಜನ ಆಗಮಿಸುವಂತೆ ಪ್ರಚಾರವನ್ನು ನಡೆಸಬೇಕು ಎಂದರು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಕಸ ಕಾಣದಂತೆ ನೋಡಿಕೊಳ್ಳಬೇಕು. ಕುಡಿಯುವ ನೀರು, ಶೌಚಾಗೃಹ ಸಮಸ್ಯೆಗಳು ತಲೆದೋರಬಾರದು. ಯಾವುದೇ ಲೋಪದೋಷಗಳು ಆಗದ ರೀತಿಯಲ್ಲಿ ಅಧಿಕಾರಿಗಳು ಕೈಗೊಳ್ಳಬೇಕಾಗಿದೆ. ಸಭೆಯ ಸೂಚನೆಯನ್ನು ಎಲ್ಲಾ ಇಲಾಖೆ ಅಧಿಕಾರಿಗಳು ಪಾಲನೆ ಮಾಡಲೇಬೇಕು. ಜಾತ್ರೆಯ ಒಂದು ವಾರ ಎಡಿಸಿ ಪ್ರತಿದಿನ ವ್ಯವಸ್ಥೆಯ ಬಗ್ಗೆ ನೋಡಿಕೊಳ್ಳುತ್ತಾರೆ.
ಈ ಬಾರಿಯ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು. ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್,ಎಡಿಸಿ ಶಿವರಾಜು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಪೌರಾಯುಕ್ತ ಬಸವರಾಜು, ಡಿವೈಎಸ್ಪಿ ರಘು, ಸರ್ಕಲ್ ಇನ್ಸ್ಪೆಕ್ಟರ್ ರವೀಂದ್ರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್, ನಗರ ಸಭೆ ಮಾಜಿ ಅಧ್ಯಕ್ಷ ಶ್ರೀಕಂಠ, ಸೇರಿದಂತೆ ದೇವಸ್ಥಾನ ವ್ಯಾಪ್ತಿ 7 ಗ್ರಾಮಗಳ ಗ್ರಾಮಸ್ಥರು ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ರಥೋತ್ಸವ ಹಿನ್ನೆಲೆ ಅಗತ್ಯ ಕ್ರಮಗಳು
ಬಸ್ ನಿಲ್ದಾಣ, ದೇವಾಲಯದ ಆಯ್ದ ಭಾಗಗಳಲ್ಲಿ ಸಿಸಿಟಿವಿ ಅಳವಡಿಕೆ. ತಾತ್ಕಾಲಿಕ ವಾಚ್ ಟವರ್ ಗಳ ನಿರ್ಮಾಣ. ರಥೋತ್ಸವ ಸಂದರ್ಭದಲ್ಲಿ ನಿರಂತರ ವಿದ್ಯುತ್ ವ್ಯವಸ್ಥೆ. ರಥೋತ್ಸವ ಸಂದರ್ಭದಲ್ಲಿ ರಥಗಳನ್ನು ಪರಿಶೀಲನೆ ಮಾಡುವುದು. ಹಳ್ಳ ಇದ್ದರೆ ಸಮತಟ್ಟು ಮಾಡುವುದು. ಸೂಕ್ತ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು. ನದಿಯಲ್ಲಿ ನೀರಿನ ಪ್ರಮಾಣವನ್ನು ಹೆಚ್ಚು ಮಾಡುವುದು. ಕಪಿಲಾ ನದಿ ಸ್ವಚ್ಛತೆಗೊಳಿಸುವುದು. ಸಾಂಕ್ರಾಮಿಕ ರೋಗಗಳು ಹರಡುದಂತೆ ಮುಂಜಾಗ್ರತೆ ಕ್ರಮ ವಹಿಸುವ ಬಗ್ಗೆ. ರಥೋತ್ಸವ ಸಂದರ್ಭದಲ್ಲಿ ಸಂಸ್ಥೆಗಳಿಂದ ಕೊಡುವ ಪ್ರಸಾದವನ್ನು ಪರಿಶೀಲನೆ ನಡೆಸುವುದು.
ಭಕ್ತಾದಿಗಳ ಆಗಮನಕ್ಕೆ ಹೆಚ್ಚುವರಿ ಬಸ್, ರೈಲುಗಳ ವ್ಯವಸ್ಥೆ. ಬೆಂಕಿ ಅವಘಡ ಹಾಗೂ ತೆಪ್ಪೋತ್ಸವದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳನ್ನು ನೇಮಿಸುವುದು. ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ. ವಿದ್ಯುತ್ ದೀಪಾಲಂಕಾರ, ಧ್ವನಿ ವರ್ಧಕ ವ್ಯವಸ್ಥೆ, ದೇವಸ್ಥಾನ ವ್ಯಾಪ್ತಿಯ ಏಳು ಗ್ರಾಮಗಳ ಮುಖ್ಯಸ್ಥರುಗಳು ಯಶಸ್ವಿಯಾಗಿ ರಥೋತ್ಸವ ನಡೆಸಲು ಸಹಕಾರ ನೀಡುವ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

