ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ಯುದ್ಧದಿಂದ ಬೆಂಗಳೂರು ಸೇರಿದಂತೆ ಎಲ್ಲೆಡೆ ಗ್ಯಾಸ್ ಸಮಸ್ಯೆ ಎದುರಾದ ಬೆನ್ನಲ್ಲೇ ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2 ರೂ ಏರಿಕೆಯಾಗಿದೆ. ಲೀಟರ್‌ಗೆ 106 ರೂಪಾಯಿ ಇದ್ದ ಪೆಟ್ರೋಲ್ ದರ 108.50 ರೂಪಾಯಿಗೆ ಏರಿಕೆಯಾಗಿದೆ. ಇನ್ನು 91 ರೂಪಾಯಿ ಇದ್ದ ಡೀಸೆಲ್ ದರ ಇದೀಗ 93.50 ರೂಪಾಯಿ ಏರಿಕೆ ಮಾಡಲಾಗಿದೆ.

ಶೆಲ್ ಪೆಟ್ರೋಲ್ ಪೂರೈಕೆದಾರರು ಪ್ರತಿ ಲೀಟರ್ ಇಂಧನ ದರದಲ್ಲಿ 2 ರೂಪಾಯಿ ಏರಿಕೆ ಮಾಡಿದ್ದಾರೆ. ಇದೀಗ ಇತರ ಪೂರೈಕೆದಾರರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ. ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆಯಾಗಿದೆ.

ಇರಾನ್ ಹಾಗೂ ಇಸ್ರೇಲ್ ಯುದ್ಧದ ಕಾರಣ ಹೊರ್ಮುಜ್ ಜಲಸಂಧಿ ಮೂಲಕ ಸರಾಗವಾಗಿ ಸರಕು ಸಾಗಣೆ ಹಡಗುಗಳು ಸಾಗುತ್ತಿಲ್ಲ. ದಾಳಿ ಆತಂಕ ಕಾರಣ ಪ್ರಯಾಸದ ಕೆಲಸವಾಗಿದೆ. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತದ ತುರ್ತು ಅಗತ್ಯಕ್ಕಾಗಿ ಇರಾನ್ ಜೊತೆ ಮಾತುಕತೆ ನಡೆಸಿ ಗ್ಯಾಸ್ ಪೂರೈಕೆ ಹಡುಗು ಭಾರತಕ್ಕೆ ಆಗಮಿಸುವಂತೆ ಮಾಡಿದೆ.

ಆದರೂ ಎಂದಿನಂತೆ ಸರಕು ಸಾಗಣೆ ಹಡಗುಗಳು ಜಲಸಂಧಿ ಮೂಲಕ ಸಾಗುತ್ತಿಲ್ಲ. ಹೀಗಾಗಿ ನಿರಂತರ ಪೂರೈಕೆಯಾಗುತ್ತಿಲ್ಲ. ಸದ್ಯ ಆಗಮಿಸಿರುವ ಗ್ಯಾಸ್ ಆಸ್ಪತ್ರೆ ಸೇರಿದಂತೆ ತುರ್ತು ಅಗತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಇತ್ತ ಭಾರತದಲ್ಲೂ ಉತ್ಪಾದನೆ ಹೆಚ್ಚಿಸಲಾಗಿದೆ.