ಬೆಂಗಳೂರು: ಒಂದನೇ ತರಗತಿಗೆ ದಾಖಲಾಗುವ 6 ವರ್ಷ ವಯಸ್ಸಿನ ಮಿತಿಯನ್ನ ಈ ವರ್ಷವೂ ಸಡಿಲ ಮಾಡಬೇಕು ಎಂದು ಮತ್ತೆ ಪೋಷಕರು ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಈ ಸಂಬಂಧ ಪೋಷಕರು ಮತ್ತು ವಿದ್ಯಾರ್ಥಿಗಳು ಸುದ್ದಿಗೋಷ್ಠಿ ನಡೆಸಿ, ವಯಸ್ಸಿನ ಮಿತಿ ಸಡಿಲ ಮಾಡುವಂತೆ ಒತ್ತಾಯ ಮಾಡಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಿದರು. ಮಕ್ಕಳು ಪೋಸ್ಟರ್ ಹಿಡಿದು ವಯಸ್ಸಿನಲ್ಲಿ ಮಿತಿ ಸಡಿಲ ಮಾಡಿ ಎಂದು ಮನವಿ ಮಾಡಿದರು.
ಈ ವೇಳೆ ಮಾತಾಡಿದ ಪೋಷಕರು, ಈ ವರ್ಷದ ದಾಖಲಾತಿಗೆ 90 ದಿನಗಳ ಸಡಿಲಿಕೆ ಕೊಡಬೇಕು. ವಯಸ್ಸಿನ ಸಡಿಲಿಕೆ ಸಮಸ್ಯೆಯಿಂದ 2.30 ಲಕ್ಷ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ. ರಾಜ್ಯ ಶಿಕ್ಷಣ ನೀತಿ (SEP) ಪ್ರಕಾರ 90 ದಿನ ಸಡಿಲಿಕೆ ಕೊಡುವ ಅವಕಾಶ ಇದೆ. ಈ ವರ್ಷಕ್ಕೆ ಅನ್ವಯ ಆಗುವಂತೆ ಸಡಲಿಕೆ ಕೊಡಬೇಕು ಎಂದು ಕೋರಿದರು.
ಜೂನ್ 1 ರಿಂದ 90 ದಿನಗಳ ವಯೋಮಿತಿ ವಿನಾಯಿತಿಗೆ ಪೋಷಕರು ಒತ್ತಾಯ ಕೇಳಿ ಬಂದಿದೆ. 2026–27 ಶೈಕ್ಷಣಿಕ ವರ್ಷದ 1ನೇ ತರಗತಿ ಪ್ರವೇಶಕ್ಕೆ 6ವರ್ಷ ವಯೋಮಿತಿ ಕಡ್ಡಾಯ ಬೇಡ. ಕನಿಷ್ಠ 90 ದಿನಗಳ ವಿನಾಯತಿ ನೀಡಿ, ಇಲ್ಲವಾದರೆ ತೊಂದರೆ ಆಗುತ್ತದೆ ಎಂದು ಪೋಷಕರು ಆಗ್ರಹಿಸಿದ್ದರು.

