ಬೆಂಗಳೂರು: ಪತಿಯೊಬ್ಬ ಪತ್ನಿ ಮೇಲೆ ಆ್ಯಸಿಡ್ ಎರಚಿ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಜೆಪಿ ನಗರದ ನಾರಾಯಣ ಕ್ಲೀನಿಕ್ ಬಳಿ ನಡೆದಿದೆ.
26 ವರ್ಷದ ಮಧುಮಿತ ಹಲ್ಲೆಗೊಳಗಾದ ಮಹಿಳೆ. ಮಧುಮಿತ ಮೂಲತಃ ಕೊಲ್ಕತ್ತಾ ಮೂಲದವಳಾಗಿದ್ದು, ಕಳೆದ ಒಂದೂವರೆ ವರ್ಷದಿಂದ ನಾರಾಯಣ ಕ್ಲೀನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಬೆಳಿಗ್ಗೆ 9:15ರ ಸುಮಾರಿಗೆ ಮಧುಮಿತ ತಿಂಡಿ ತಿನ್ನಲು ಹೊರಗೆ ಹೋಗಿದ್ದ ವೇಳೆ ಪತಿ ವೆಂಕಟೇಶ್ ಬೈಕ್ನಲ್ಲಿ ಬಂದು ಆಕೆಯನ್ನು ಅಟ್ಟಾಡಿಸಿಕೊಂಡು ಬಂದಿದ್ದಾನೆ. ಮಧುಮಿತ ಆಸ್ಪತ್ರೆಯ ಪಾರ್ಕಿಂಗ್ ಜಾಗದ ಬಳಿ ಕೂಗಾಡಿಕೊಂಡು ಬಂದಿದ್ದಾಳೆ. ಈ ವೇಳೆ ವೆಂಕಟೇಶ್ ಮಚ್ಚಿನಿಂದ ಹಲ್ಲೆ ನಡೆಸಿ ಆ್ಯಸಿಡ್ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಹಲ್ಲೆ ನಡೆಯುತ್ತಿದ್ದ ವೇಳೆ ಸ್ಥಳೀಯರು ಮಧುಮಿತಳ ರಕ್ಷಣೆಗೆ ಮುಂದಾಗಿದ್ದಾರೆ. ಕೆಲವರು ಕಲ್ಲಿನಿಂದ ಹೊಡೆದು ಆರೋಪಿಯನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ರಕ್ಷಣೆಗೆ ಬಂದವರ ಮೇಲೂ ಆರೋಪಿ ಹಲ್ಲೆಗೆ ಮುಂದಾಗಿದ್ದ.
ಪಕ್ಕದ ಸಿಗ್ನಲ್ನಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಜೆಪಿ ನಗರ ಪೊಲೀಸರು ವೆಂಕಟೇಶ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಧುಮಿತ ಅವರಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜೆಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

