ಬೆಂಗಳೂರು : ನಗರದಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದ ಲ್ಯಾಂಬೋರ್ಗಿನಿ ಕಾರು ಚಾಲನೆಯ ಪ್ರಕರಣ ಬೆಳಕಿಗೆ ಬಂದಿದೆ.

ಮೈಸೂರು ರಸ್ತೆಯ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ಸ್ಪೋರ್ಟ್ಸ್ ಕಾರಿನಲ್ಲಿ ಅತಿವೇಗವಾಗಿ ಚಾಲನೆ ಮಾಡಿದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ಆಧಾರದಲ್ಲಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

MH 01 EB 7434 ಸಂಖ್ಯೆಯ ಲ್ಯಾಂಬೋರ್ಗಿನಿ ಕಾರು ಸಾರ್ವಜನಿಕ ರಸ್ತೆಯಲ್ಲಿ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಚಲಾಯಿಸಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ದೃಶ್ಯಗಳನ್ನು ಆಧರಿಸಿ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಸದ್ಯ ಲ್ಯಾಂಬೋರ್ಗಿನಿ ಕಾರು ಚಾಲಕನ ವಿರುದ್ಧ BNS ಸೆಕ್ಷನ್ 281 ಅಡಿ ಪ್ರಕರಣ ದಾಖಲಿಸಲಾಗಿದೆ.

ಇದು ಜೀವಕ್ಕೆ ಅಪಾಯಕಾರಿಯಾದ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆಗೆ ಸಂಬಂಧಿಸಿದೆ. ಪ್ರಕರಣ ದಾಖಲಿಸಿದ ನಂತರ ಮುಂದಿನ ಕಾನೂನು ಕ್ರಮಕ್ಕಾಗಿ ಸಂಚಾರಿ ಪೊಲೀಸರು RTO ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

ಸದ್ಯ ಕಾರು ಚಾಲಕನ ಪತ್ತೆಗೆ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದು, ಸಾರ್ವಜನಿಕ ಸುರಕ್ಷತೆ ವಿಚಾರದಲ್ಲಿ ಯಾವುದೇ ರೀತಿಯ ಅಜಾಗರೂಕ ಚಾಲನೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.