ಕಾರವಾರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 180 ಟನ್ ಮರಳು ದಾಸ್ತಾನನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿರುವ ಘಟನೆ ತಾಲ್ಲೂಕಿನ ಹೋಟೆಗಾಳಿ ಗ್ರಾಮದ ಕಾಳಿ ನದಿತೀರದಲ್ಲಿ ನಡೆದಿದೆ.

‘ಕಾಳಿ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧವಿದೆ. ಆದಾಗ್ಯೂ, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ದೂರು ಬಂದಿತ್ತು. ದಾಳಿ ನಡೆಸಿದ ವೇಳೆ ನದಿ ತೀರದಲ್ಲಿ ಮರಳು ರಾಶಿ ಹಾಕಿರುವುದು ಪತ್ತೆಯಾಯಿತು. ಅದನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಆಶಾ ಜಿ.ಎಸ್ ತಿಳಿಸಿದ್ದಾರೆ.

‘ಅಕ್ರಮ ಮರಳು ಗಣಿಗಾರಿಕೆ ಕಾಳಿ ನದಿಯಲ್ಲಿ ಹೆಚ್ಚುತ್ತಿರುವ ದೂರುಗಳು ಬರುತ್ತಿದ್ದು, ಅವುಗಳ ನಿಯಂತ್ರಣಕ್ಕೆ ನದಿ ತೀರದಲ್ಲಿ ಕಾಲುವೆ ತೆಗೆಸಲಾಗುವುದು’ ಎಂದು ಹೇಳಿದ್ದಾರೆ.