ಬೆಂಗಳೂರು: ಬೆಂಗಳೂರಿನಲ್ಲಿ ಅಡುಗೆ ಅನಿಲದ ಕೊರತೆ ಹೆಚ್ಚಾಗುತ್ತಿದ್ದಂತೆ ಸಮಸ್ಯೆ ಗಂಭೀರವಾಗಿದೆ. ಕೆಲವು ಮಧ್ಯವರ್ತಿಗಳು ಹೆಚ್ಚುವರಿ ಹಣ ನೀಡುವವರಿಗೆ ಮಾತ್ರ ಸಿಲಿಂಡರ್ ಒದಗಿಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಬುಕ್ಕಿಂಗ್ ಪ್ರಕ್ರಿಯೆಯನ್ನು ತಡೆದು ಗ್ರಾಹಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಏಜೆನ್ಸಿಗಳ ವಿರುದ್ಧ ದೂರುಗಳೂ ಬಂದಿವೆ. ಹೀಗಾಗಿ ಅಧಿಕಾರಿಗಳು ಅಕ್ರಮ ಸಂಗ್ರಹದ ವಿರುದ್ಧ ಕ್ರಮ ಆರಂಭಿಸಿದ್ದಾರೆ.

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಹಾರ ನಿರೀಕ್ಷಕರ ದಾಳಿಯ ವೇಳೆ ಪರವಾನಗಿ ಇಲ್ಲದೆ ಅನೇಕ ಖಾಸಗಿ ಕಂಪನಿಗಳ ಸಿಲಿಂಡರ್ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಶ್ರೀ ವಿನಾಯಕ ಗ್ಯಾಸ್ ಏಜೆನ್ಸಿಯ ಮಾಲೀಕ ಜನಾರ್ದನ್ ವಿರುದ್ಧ FIR ದಾಖಲಿಸಲಾಗಿದೆ.ಈ ಬಗ್ಗೆ ನಿಖರ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿರುವ ಏಜೆನ್ಸಿಯನ್ನು ಪರಿಶೀಲಿಸಿದರು.ಈ ವೇಳೆ ಸುಮಾರು 498 ಕೆಜಿ ಗ್ಯಾಸ್ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ಸಂಗ್ರಹಿಸಿದ್ದದ್ದು ಪತ್ತೆಯಾಗಿದೆ.