ಬೆಂಗಳೂರು: ಥೈಲ್ಯಾಂಡ್‌ನ ಫುಕೆಟ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಬಂಧಿತ ಆರೋಪಿಯು ತನ್ನ ಚೆಕ್-ಇನ್ ಬ್ಯಾಗೇಜ್‌ನಲ್ಲಿ ಅತ್ಯಂತ ಸೂಕ್ಷ್ಮವಾಗಿ ಬಚ್ಚಿಟ್ಟುಕೊಂಡು ತಂದಿದ್ದ ಸುಮಾರು 3.05 ಕೆಜಿ ತೂಕದ ಉನ್ನತ ತಳಿಯ ಹೈಡ್ರೋಪೋನಿಕ್ ಗಾಂಜಾವನ್ನು ಅಧಿಕಾರಿಗಳು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಜಪ್ತಿ ಮಾಡಲಾದ ಈ ವಿದೇಶಿ ಗಾಂಜಾದ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 1.07 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಕಸ್ಟಮ್ಸ್ ಕಾಯ್ದೆ ಹಾಗೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಈ ಮಾದಕ ವಸ್ತು ಜಾಲದ ಹಿಂದೆ ಇರುವ ಪ್ರಮುಖ ರೂವಾರಿಗಳು ಯಾರು ಮತ್ತು ನಗರದಲ್ಲಿ ಇದನ್ನು ಯಾರಿಗೆ ತಲುಪಿಸಲು ತರಲಾಗಿತ್ತು ಎಂಬ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

