ಕೆ.ಆರ್.ಪುರ: ಬಿದರಹಳ್ಳಿ ಸಮೀಪದ ರಾಂಪುರದ ಹೊರವಲಯದಲ್ಲಿ ಪ್ಲಾಸ್ಟಿಕ್ ಮರುಬಳಕೆ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿದೆ.

ಗುರುವಾರ ಮಧ್ಯಾಹ್ನ 3 ಗಂಟೆಗೆ, ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಬಿಸಿಲಿನ ಧಗೆಗೆ ಪೂರ್ತಿ ಗೋದಾಮು ಆವರಿಸಿಕೊಂಡಿತು. ಮರುಬಳಕೆಗೆ ಶೇಖರಿಸಿದ್ದ ಪ್ಲಾಸ್ಟಿಕ್‌ ಬಾಟಲ್, ಸೋಫಾ ಸ್ಪಾಂಜ್, ಪ್ಲಾಸ್ಟಿಕ್ ಕುರ್ಚಿ ಇತರ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗೆ ಸಂಪೂರ್ಣ ಆಹುತಿಯಾದವು.

ಘಟಕದಲ್ಲಿದ್ದ ಶೆಡ್‌ಗಳಲ್ಲಿ 15ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಘಟಕದಿಂದ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟಕದ ಮಾಲೀಕ ಮಾಧವ, ತಮಿಳುನಾಡಿನವರಾಗಿದ್ದ ಮತದಾನಕ್ಕೆ ತೆರಳಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಆರು ಗಂಟೆ ಸಾಹಸ ಪಟ್ಟು ಬೆಂಕಿಯನ್ನು ತಹಬದಿಗೆ ತಂದರು.