ನಂಜನಗೂಡು: ನಗರದ ನಂಜನಗೂಡು ಮತ್ತು ಊಟಿ ರಾಷ್ಟ್ರೀಯ ಹೆದ್ದಾರಿಯ ಬಳಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಕಣ್ಮುಚ್ಚಿ ಕುಳಿತಿರುವ ನಂಜನಗೂಡು ನಗರಸಭಾ ಅಧಿಕಾರಿಗಳ ವಿರುದ್ಧ ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂಜನಗೂಡು ನಗರ ಕೈಗಾರಿಕಾ ಪ್ರದೇಶವಾಗಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರದೇಶವಾಗಿದೆ. ನಗರದಲ್ಲಿ ಭೂಮಾಫಿಯಾ ನಡೆಯುತ್ತಿದೆ. ನಗರಸಭಾ ವ್ಯಾಪ್ತಿಗೆ ಬರುವ ಅನೇಕ ಬಡಾವಣೆಗಳಲ್ಲಿ ಕಾನೂನು ಬಾಹಿರವಾಗಿ ನಗರಸಭೆಯ ಅನುಮತಿಗಳಿಲ್ಲದೆ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟುವುದರ ಮುಖಾಂತರ ತಮ್ಮ ವ್ಯಾಪಾರಿಕರಣವನ್ನು ದಿಗೋಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಂಜನಗೂಡು ಪಟ್ಟಣ ದೊಡ್ಡಮಟ್ಟದಲ್ಲಿ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ 766 ಹಾದು ಹೋಗುವ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ನಿಯಮಗಳನ್ನು ಗಾಳಿಗೆ ತೂರಿ, ರಸ್ತೆ ಪಕ್ಕದಲ್ಲಿ ಅಕ್ರಮ ಕಟ್ಟಡವನ್ನು ನಿರ್ಮಿಸುವ ಕೆಲಸ ನಡೆಯುತ್ತಿದ್ದರು ನಗರಸಭಾ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕದೆ ಬೇಕಾಬಿಟ್ಟಿ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡುವ ನಗರಸಭಾ ಆಡಳಿತವನ್ನು ನಾವು ಖಂಡಿಸುತ್ತೇವೆ.

ಕೂಡಲೇ ಪಟ್ಟಣದ ವ್ಯಾಪ್ತಿಯಲ್ಲಿ ಬರುವಂಥ ಅಕ್ರಮ ಕಟ್ಟಡಗಳನ್ನು ನಗರಸಭೆ ಪರಿಶೀಲನೆ ಮಾಡಬೇಕು. ಅವರ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು. ಅಲ್ಲದೆ ಅಕ್ರಮ ಕಟ್ಟಡ ನಿರ್ಮಾಣದಿಂದ ಆಗುತ್ತಿರುವ ಕಿರಿಕಿರಿಗಳನ್ನು ತಪ್ಪಿಸಬೇಕು ಇಲ್ಲವಾದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ ವಿಜಯಕುಮಾರ್, ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್, ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಎಚ್ಚರಿಕೆ ನೀಡಿದ್ದಾರೆ.