ಬೆಂಗಳೂರು: ಎಲ್‌ಪಿಜಿ ದರ ಏರಿಕೆಯಾಗಿದ್ದು, ವಿಶ್ವಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ರಾಜೀನಾಮೆ ನೀಡಲಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಎಲ್‌ಪಿಜಿ ದರ ಏರಿಕೆ ಮಧ್ಯಮ ವರ್ಗದ ಕುಟುಂಬಗಳಿಗೆ ವೆಚ್ಚ ದುಬಾರಿಯಾಗಲಿದೆ. ಈ ಏರಿಕೆ ಅನಿವಾರ್ಯ ಕ್ರಮವೇನಲ್ಲ. ಭಾರತದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿಹೋಗಿವೆ. ಈ ಸಮಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಿಸಿರುವುದು ನೆಲಕ್ಕೆ ಬಿದ್ದವನಿಗೆ ಒದ್ದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 60 ರೂ.ಯಷ್ಟು ಹೆಚ್ಚಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆಯ ವೆಚ್ಚ ದುಬಾರಿಯಾಗಲಿದೆ. ಈ ಏರಿಕೆ ಅನಿವಾರ್ಯ ಕ್ರಮವೇನಲ್ಲ, ಇದು ಶರಣಾಗತಿಯನ್ನೇ ದೇಶದ ಕಾರ್ಯತಂತ್ರವೆಂದು ತಪ್ಪಾಗಿ ತಿಳಿದುಕೊಂಡ ವಿದೇಶಾಂಗ ನೀತಿಯ ಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಮಾತುಗಳಿಗೆ ಮೂಕರಂತೆ ತಲೆಯಾಡಿಸುವ ಮೂಲಕ ಭಾರತದ ವ್ಯೂಹಾತ್ಮಕ ಸ್ವಾತಂತ್ರ‍್ಯವನ್ನು ಬೇರೊಂದು ರಾಷ್ಟ್ರದ ಪಾದದಡಿ ಇಟ್ಟಿದ್ದಾರೆ ಎಂದರು.