ಬಳ್ಳಾರಿ: ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಒಡೆತನದ ‘ಜಿ ಸ್ಕ್ವೇರ್’ ಬಡಾವಣೆಯ ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್ ಹರ್ಷ ‘ಅಗ್ನಿ ಅವಘಡದ ಪ್ರಕರಣವನ್ನು ನಾವು ಬೇಧಿಸಿದ್ದೇವೆ. ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಇದರಲ್ಲಿ ಕೆಲವರು ಅಪ್ರಾಪ್ತರಿದ್ದಾರೆ. ಅವರ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಚಾರಣೆ ಪೂರ್ಣಗೊಂಡ ಬಳಿಕ ಇತರ ಮಾಹಿತಿಯನ್ನು ತಿಳಿಸಲಾಗುವುದು’ ಎಂದು ಹೇಳಿದ್ದಾರೆ.
ಟಿ.ವಿ, ಚೇರು, ಸೋಫಾ ಸೆಟ್ಟುಗಳು, ಕಿಚನ್ ಸೆಟ್ಟುಗಳು, ಎ.ಸಿ, ಫ್ರಿಡ್ಜ್, ಮನೆಗೆ ಮಾಡಿಸಿದ್ದ ಪಿ.ಒ.ಪಿ, ಮರದ ಬಾಗಿಲುಗಳು ಸೇರಿ ಒಟ್ಟು ₹1.25 ಕೋಟಿ ನಷ್ಟವಾಗಿದೆ ಎಂದು ಜಿ ಸ್ಕ್ವೇರ್ ಬಡಾವಣೆಯ ಸೈಟ್ ಎಂಜಿನಿಯರ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಶುಕ್ರವಾರ ರಾತ್ರಿಯೇ ಎಫ್ಐಆರ್ ದಾಖಲು ಮಾಡಿದ್ದಾರೆ.

