ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಜ.26ರ ಗಣರಾಜ್ಯೋತ್ಸವದಂದು ಭಾರತೀಯ ಸೇನೆಗೆ ಸಂಬಂಧಿಸಿದ ವಿವಿಧ ಪದಕಗಳ ಪ್ರದರ್ಶನ ಬೆಳಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ. ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾದ ಡಾ.ಕೆ.ಜಿ.ಶೆಣೈ ಅವರು ಈ ಪದಕಗಳನ್ನು ಸಂಗ್ರಹಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ನಾನಾ ಸಂದರ್ಭಗಳಲ್ಲಿ ಕೊಡಮಾಡಲಾಗುವ ಪದಕಗಳು ಈ ಪ್ರದರ್ಶನದ ಭಾಗವಾಗಿರಲಿವೆ. ಅಮೋಘ ಸಾಹಸಕ್ಕೆ ನೀಡುವ ಪರಮವೀರ ಚಕ್ರದಿಂದ ತೊಡಗಿ ನಾನಾ ಬಗೆಯ ಶೌರ್ಯ ಪದಕಗಳನ್ನು ಪ್ರದರ್ಶಿಸಲಾಗುತ್ತದೆ.
ಜತೆಗೆ ಸೇನೆಯಲ್ಲಿ ನಿರ್ದಿಷ್ಟ ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪದಕಗಳು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಂತಹ ತಂಡಗಳಲ್ಲಿ ಭಾಗವಹಿಸಿದವರಿಗೆ ನೀಡುವ ಪದಕಗಳು, ಭಾರತದ ಕೆಲವು ಆಯ್ದ ಸ್ಥಳಗಳಲ್ಲಿ ಸೇವೆ ಸಲ್ಲಿಸಿದವರಿಗಾಗಿ ನೀಡುವ ಪದಕಗಳು, ವಿಶೇಷ ಸಂದರ್ಭಗಳಲ್ಲಿನ ಸ್ಮರಣಿಕೆಯ ರೂಪದ ಪದಕಗಳು ಹೀಗೆ ನೂರಕ್ಕೂ ಅಧಿಕ ಪದಕಗಳ ಪ್ರದರ್ಶನವನ್ನು ಡಾ.ಕೆ.ಜಿ.ಶೆಣೈ ನಡೆಸಿಕೊಡಲಿದ್ದಾರೆ. ಈ ಪದಕಗಳಲ್ಲಿ ಶೌರ್ಯ ಪ್ರಶಸ್ತಿಗಳ ಪದಕಗಳು ಮೂಲದ ಪ್ರತಿಕೃತಿಗಳಾದರೆ ಉಳಿದೆಲ್ಲಾ ಪದಕಗಳು ಮೂಲ ಪದಕಗಳೇ ಆಗಿವೆ ಎಂಬುದು ಗಮನಾರ್ಹ.
ಇದರೊಂದಿಗೆ ಸ್ವಾತಂತ್ರö್ಯ ಪೂರ್ವದಲ್ಲಿ ಬ್ರಿಟಿಷ್ ಸೇನೆಯ ಭಾರತೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದರಿಗೆ ನೀಡಲಾದ ಪದಕಗಳು, ಮೊದಲ ವಿಶ್ವಯುದ್ಧ, ಎರಡನೇ ವಿಶ್ವಯುದ್ಧದಲ್ಲಿ ಭಾಗಿಯಾದ ಭಾರತೀಯ ಸೈನಿಕರಿಗೆ ನೀಡಿದ ಪದಕಗಳು, ಬ್ರಿಟಿಷರು ಪ್ರಾಪಂಚಿಕವಾಗಿ ನಡೆಸಿದ ವಿವಿಧ ಯುದ್ಧಗಳಲ್ಲಿ ಭಾಗಿಯಾದ ಭಾರತೀಯರಿಗೆ ನೀಡಲಾದ ಪದಕಗಳು, ಮಿನಿಯೇಚರ್ ಪದಕಗಳು, ಕಾರ್ಗಿಲ್ ಯುದ್ಧದಲ್ಲಿ ನೀಡಲಾದ ಪದಕಗಳೇ ಮೊದಲಾದ ಪದಕಗಳೂ ಇಲ್ಲಿ ಪ್ರದರ್ಶನಗೊಳ್ಳಲಿವೆ. ಎಲ್ಲಾ ಪದಕಗಳ ಬಳಿ ಅವುಗಳ ಬಗೆಗಿನ ವಿವರಣೆಗಳೂ ಇರಲಿವೆ.
ಈ ಪದಕ ಪ್ರದರ್ಶನ ಜನವರಿ 26ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಹಾಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಕೂಡ ಈ ಪದಕಗಳ ವೀಕ್ಷಣೆ ನಡೆಸಬಹುದಾಗಿದೆ. ಬೆಳಗ್ಗೆ 9 ರಿಂದ ಸಂಜೆ 4ರ ತನಕ ಈ ಪ್ರದರ್ಶನ ಜರಗಲಿದೆ.
ಡಾ.ಕೆ.ಜಿ.ಶೆಣೈ : ತನ್ನ ಎಂ.ಬಿ.ಬಿ.ಎಸ್. ಅಧ್ಯಯನದ ನಂತರ ಭಾರತೀಯ ಸೇನೆಯೆಡೆಗೆ ಆಸಕ್ತಿ ಮೂಡಿ ಶಾರ್ಟ್ ಸರ್ವಿಸ್ ಕಮಿಷನ್ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ 1987 ರಿಂದ 1992ರವರೆಗೆ ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರುವ ನೆಲೆಯಲ್ಲಿ ಪ್ರೇರಣೆ ನೀಡುತ್ತಿದ್ದಾರೆ.
ಸೇನೆಯ ಬಗೆಗೆ, ಸೇನೆಗೆ ಸೇರುವ ಬಗೆಗೆ ಮಕ್ಕಳಲ್ಲಿ, ಹೆತ್ತವರಲ್ಲಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಪ್ರಸ್ತುತ ಡಾ.ಕೆ.ಜಿ.ಶೆಣೈ ಅವರು ಬಿ.ಸಿ.ರೋಡ್‌ನಲ್ಲಿ ವಾಸವಾಗಿದ್ದಾರೆ ಹಾಗೂ 1993ರಿಂದ ಬಿ.ಸಿ.ರೋಡ್‌ನಲ್ಲಿ ಪ್ರಥ್ವಿ ನರ್ಸಿಂಗ್ ಹೋಮ್ ಅನ್ನು ನಡೆಸುತ್ತಿದ್ದು, ಪ್ರಖ್ಯಾತ ವೈದ್ಯರೆನಿಸಿದ್ದಾರೆ.

