ವಾಷಿಂಗ್ಟನ್: ಅಮೆರಿಕದ ಟ್ರಂಪ್ ಆಡಳಿತವು ಜಾಗತಿಕವಾಗಿ ಈಗಾಗಲೇ ಸಲ್ಲಿಕೆಯಾಗಿರುವ ವಲಸಿಗರ ವೀಸಾ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಕ್ರಮ ವಲಸೆ ತಡೆ ಮತ್ತು ಗ್ರೀನ್ ಕಾರ್ಡ್ ವಿತರಣೆಯಲ್ಲಿ ಅಧ್ಯಕ್ಷ ಟ್ರಂಪ್ ಅವರು ತರುತ್ತಿರುವ ಕಠಿಣ ನೀತಿಗಳ ಭಾಗ ಇದಾಗಿದೆ. ಅರ್ಹ ಅಮೆರಿಕನ್ನರಿಗೆ ಮೀಸಲಾಗಿರುವ ಸರ್ಕಾರಿ ಸೌಲಭ್ಯಗಳ ಮೇಲೆ ಅವಲಂಬಿತರಾಗುವವರ (ಪಬ್ಲಿಕ್ ಚಾರ್ಜ್) ಪ್ರವೇಶವನ್ನು ಮಿತಿಗೊಳಿಸುವ ಮತ್ತು ನಿರ್ಬಂಧಗಳನ್ನು ಬಿಗಿ ಮಾಡುವ ಕ್ರಮ ಇದು’ ಎಂದು ‘ಫೈನಾನ್ಸಿಯಲ್ ಟೈಮ್ಸ್’ ವರದಿ ತಿಳಿಸಿದೆ.
‘ಪಬ್ಲಿಕ್ ಚಾರ್ಜ್’ ಅಡಿ ಸಲ್ಲಿಕೆಯಾದ ಅರ್ಜಿಗಳ ಸಮಗ್ರ ಮತ್ತು ಸ್ಥಿರ ಪರಿಶೀಲನೆಗಾಗಿ ಅಮೆರಿಕ ಕಾನ್ಸುಲರ್ ಕಚೇರಿ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದೆ. ಕಾನ್ಸುಲರ್ ಅಧಿಕಾರಿಯು ಅರ್ಜಿದಾರನ ಆರ್ಥಿಕ ಸ್ಥಿತಿ, ವಯಸ್ಸು, ಆರೋಗ್ಯ, ಕೌಶಲ ಮತ್ತು ಕುಟುಂಬದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.
ರಾಯಭಾರಿ ಮತ್ತು ಕಾನ್ಸುಲೇಟ್ ಕಚೇರಿಗಳು ಈಗಾಗಲೇ ಇ–ಮೇಲ್ ಮೂಲಕ ಸಂದರ್ಶನ ಸ್ಥಗಿತಗೊಂಡಿರುವ ಹಾಗೂ ಹೊಸ ದಿನಾಂಕ ನಿಗದಿ ಮಾಡಲಿರುವ ಬಗ್ಗೆ ಮಾಹಿತಿ ನೀಡಿವೆ. ಟ್ರಂಪ್ ಆಡಳಿತ ಎಚ್–1ಬಿ ವೀಸಾಗೆ 103,265 ಡಾಲರ್ (₹98.45 ಲಕ್ಷ) ಹೊಸ ಶುಲ್ಕ ವಿಧಿಸುವ ಪ್ರಸ್ತಾಪ ಮಾಡಿದ ಮರುದಿನವೇ ವೀಸಾ ಸಂದರ್ಶನ ಸ್ಥಗಿತ ನಿರ್ಧಾರ ಹೊರಬಿದ್ದಿದೆ. ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಪ್ರತಿವರ್ಷ ಸಾವಿರಾರು ಪ್ರತಿಭಾವಂತರನ್ನು ಕರೆಸಿಕೊಳ್ಳುವ ತಂತ್ರಜ್ಞಾನ ಕಂಪನಿಗಳ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.

