ಜಪಾನ್: ನಾಯಿಯನ್ನು ನಿಷ್ಠಾವಂತ ಪ್ರಾಣಿ ಎನ್ನಲಾಗುತ್ತದೆ. ಬಹುತೇಕರ ಮನೆಯಲ್ಲಿ ನಾಯಿ ಸಾಕೋದನ್ನು ನಾವು ನೋಡ್ಬಹುದು. ನಾಯಿ ತನ್ನ ಯಜಮಾನನಿಗೆ ಸದಾ ನಿಷ್ಠೆಯಿಂದ ಇರುತ್ತದೆ, ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ಪ್ರೀತಿಸುವ, ನಂಬಲು ಅರ್ಹವಾದ ಪ್ರಾಣಿ ನಾಯಿ ಎನ್ನಲಾಗುತ್ತದೆ. ಜಪಾನ್ ವ್ಯಕ್ತಿ ಟೊಕೊ ನಾಯಿಯನ್ನು ಸಾಕೋ ಬದಲು ತಾನೇ ನಾಯಿಯಾಗಿದ್ದಾನೆ.
ಜಪಾನ್ ನ ವ್ಯಕ್ತಿ ಟೊಕೊ ನಾಯಿಯಾಗಿ ಪರಿವರ್ತನೆಯಾಗಿದ್ದಾನೆ. ಟೊಕೊಗೆ ನಾಯಿ ರೂಪ ನೀಡುವ ಕೆಲಸವನ್ನು ಜಪಾನ್ ನ ಜೆಪೆಟ್ ಕಂಪನಿ ಮಾಡಿದೆ. ಈ ಕಂಪನಿ ಮನುಷ್ಯನಿಗಾಗಿ ಅಲ್ಟ್ರಾ-ರಿಯಲಿಸ್ಟಿಕ್ ನಾಯಿಯ ವೇಷಭೂಷಣವನ್ನು ತಯಾರಿಸಿದೆ. ಅದನ್ನು ತಯಾರಿಸಲು 40 ದಿನಗಳನ್ನು ತೆಗೆದುಕೊಂಡಿದೆ. ಜೆಪೆಟ್ ಕಂಪನಿ, ಟಿವಿ ಜಾಹೀರಾತು, ಸಿನಿಮಾಗಳಿಗೆ ಅಗತ್ಯವಿರುವ ವೇಷಭೂಷಗಳನ್ನು ತಯಾರಿಸುವ ಕಂಪನಿಯಾಗಿದೆ.
ಸೌಂದರ್ಯ ಹೆಚ್ಚಿಸಿಕೊಳ್ಳಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಅದ್ರಂತೆ ಟೊಕೊ ನಾಯಿಯಾಗಲು ಸುಮಾರು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.
ಐ ವಾಂಟ್ ಟು ಬಿ ಎ ಅನಿಮಲ್ ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಟೊಕೊ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತದೆ. 31000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಚಾನೆಲ್ ನಲ್ಲಿ ಟೊಕೊ ವಿಡಿಯೋವನ್ನು ಸುಮಾರು 10 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ.