ಇಂಫಾಲ್: ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನ್ಯೂ ಕೈಥೆಲ್‌ಮಾನ್ಬಿ ಪ್ರದೇಶದ ಲೋಯಿಬೋಲ್ ಗ್ರಾಮದ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ಹಿಂಸಾಚಾರಕ್ಕೆ ಮೂವರು ಬಲಿಯಾಗಿದ್ದು, ಹಲವಾರು ಮನೆಗಳು ಸುಟ್ಟು ಭಸ್ಮವಾಗಿವೆ.

ಮುಂಜಾನೆ 4:10 ರ ಸುಮಾರಿಗೆ ಈ ದಾಳಿ ನಡೆದಿದೆ. ಭಾರೀ ಶಸ್ತ್ರಸಜ್ಜಿತ ದಾಳಿಕೋರರು ಗ್ರಾಮದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ಗ್ರಾಮದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.

ಮೃತರನ್ನು ಲೆತ್ಖೋಂಗಮ್ ಹಾವೋಕಿಪ್, ಟಿನ್ಮರಿ ಹಾವೋಕಿಪ್ ಮತ್ತು ಜಂಗ್ಮಿನ್ಲಾಲ್ ಹಾವೋಕಿಪ್ ಎಂದು ಗುರುತಿಸಲಾಗಿದೆ. ಪ್ರದೇಶದಲ್ಲಿ ತೀವ್ರ ಗುಂಡಿನ ಚಕಮಕಿ ಮತ್ತು ಬೆಂಕಿ ಇಡುವ ಸುದ್ದಿ ತಿಳಿದ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿವೆ.