ಸಿಡ್ನಿ: ಸಿಡ್ನಿಯ ಪಶ್ಚಿಮ ಉಪನಗರ ಮೆರ್ರಿಲ್ಯಾಂಡ್ಸ್ನಲ್ಲಿ ಶುಕ್ರವಾರ 23 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಖಾಲಿಸ್ತಾನ್ ಬೆಂಬಲಿಗರು ಲೋಹದ ಕಂಬದಿಂದ ಹೊಡೆದು ಗಾಯಗೊಳಿಸಿದ್ದಾರೆ.
ವಿದ್ಯಾರ್ಥಿ ಬಿಡುವಿನ ವೇಳೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ನಾಲ್ವರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಿ ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ನಾನು ಕಾರಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದಾಗ ಖಲಿಸ್ತಾನ್ ಬೆಂಬಲಿಗರು ಬಂದರು. ಅವರಲ್ಲಿ ಒಬ್ಬ ನನ್ನ ವಾಹನದ ಎಡಭಾಗದ ಬಾಗಿಲನ್ನು ತೆರೆದು ನನ್ನ ಎಡಗಣ್ಣು, ಕೆನ್ನೆಗೆ ಕಬ್ಬಿಣದ ರಾಡ್ನಿಂದ ಹೊಡೆದ ಎಂದು ತಿಳಿಸಿದ್ದಾರೆ.
ಗುಂಪಿನಲ್ಲಿದ್ದ ಇಬ್ಬರು ತಮ್ಮ ಫೋನ್ಗಳಲ್ಲಿ ದಾಳಿಯನ್ನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದರು. ನಾಲ್ಕೈದು ಜನರು ತನಗೆ ಹೊಡೆಯುತ್ತಿದ್ದರು, ಗೂಂಡಾಗಳು ಈ ವೇಳೆ “ಖಲಿಸ್ತಾನ್ ಜಿಂದಾಬಾದ್” ಘೋಷಣೆ ಕೂಗುತ್ತಿದ್ದರು ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ದಾರಿಹೋಕರು ಪೊಲೀಸರಿಗೆ ತಿಳಿಸಿದ್ದು, ನ್ಯೂ ಸೌತ್ ವೇಲ್ಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಯನ್ನು ರಕ್ಷಿಸಿದರು.