ಡೆನ್ವರ್: ಅಮೆರಿಕದ ಕೊಲರಾಡೊ ರಾಜ್ಯದ ಸಲಿಂಗಕಾಮಿಗಳ ನೈಟ್ ಕ್ಲಬ್ ಒಳಗೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, ಇತರ 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಡೆನ್ವರ್ ನಿಂದ ಸುಮಾರು ಒಂದು ಗಂಟೆ ದೂರದಲ್ಲಿರುವ ಕೊಲೊರಾಡೋ ಸ್ಪ್ರಿಂಗ್ಸ್ ನಗರದ ಕ್ಲಬ್ ಕ್ಯೂನಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.
ಶನಿವಾರ ರಾತ್ರಿ 11.56 ಕ್ಕೆ ಸಕ್ರಿಯ ಶೂಟರ್ ಬಗ್ಗೆ ಪೊಲೀಸರಿಗೆ ಕರೆಗಳು ಬಂದಿವೆ ಎಂದು ಕೊಲೊರಾಡೋ ಸ್ಪ್ರಿಂಗ್ಸ್ ಪೊಲೀಸ್ ಇಲಾಖೆ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿಯನ್ನು 22 ವರ್ಷದ ಆಂಡರ್ಸನ್ ಲೀ ಆಲ್ಡ್ರಿಚ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಆಲ್ಡ್ರಿಚ್ ಅವರು ರೈಫಲ್ನೊಂದಿಗೆ ಕ್ಲಬ್ ಗೆ ಪ್ರವೇಶಿಸುತ್ತಿದ್ದಂತೆ ತಕ್ಷಣವೇ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಕೊಲೊರಾಡೋ ಸ್ಪ್ರಿಂಗ್ಸ್ ಪೊಲೀಸ್ ಮುಖ್ಯಸ್ಥ ಆಡ್ರಿಯನ್ ವಾಸ್ಕ್ವೆಜ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಘಟನಾ ಸ್ಥಳದಲ್ಲಿ ಎರಡು ಬಂದೂಕುಗಳು ಪತ್ತೆಯಾಗಿದ್ದು, ಶೂಟರ್ ಉದ್ದನೆಯ ರೈಫಲ್ ಬಳಸಿದ್ದಾನೆ ಎಂದು ಅಂದಾಜಿಸಲಾಗಿದೆ.