ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ವಾರ ಕಳೆದಿದೆ. ಹೀಗಿರುವಾಗ ರಷ್ಯಾದ ದಾಳಿಯಿಂದ ಉಕ್ರೇನ್ನಲ್ಲಿ ಉಂಟಾದ ಯುದ್ಧ ಅಪರಾಧ ಪರಿಸ್ಥಿತಿ ಸಂಬಂಧ ತನಿಖೆ ಶುರು ಮಾಡುವುದಾಗಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತಿಳಿಸಿದೆ.
ರಷ್ಯಾ ಆಕ್ರಮಣದಿಂದ ಉಕ್ರೇನ್ನಲ್ಲಿ ಎದುರಾಗಿರುವ ಪರಿಸ್ಥಿತಿಯ ತನಿಖೆಯನ್ನು ಆದಷ್ಟು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ನ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಘೋಷಿಸಿದ್ದಾರೆ.
2014ರಿಂದಲೂ ಉಕ್ರೇನ್ನಲ್ಲಿ ಯುದ್ಧ ಅಪರಾಧಗಳು ಮತ್ತು ಮಾನವೀಯತೆ ವಿರುದ್ಧ ದೌರ್ಜನ್ಯ, ಅಪರಾಧಗಳು ನಡೆಯುತ್ತ ಬಂದಿವೆ ಎಂಬುದಕ್ಕೆ ಸಮಂಜಸವಾದ ಸಾಕ್ಷಿಗಳು ಇವೆ. ಹೀಗಾಗಿ ಕೂಡಲೇ ತನಿಖೆ ಕೈಗೆತ್ತಿಕೊಳ್ಳುತ್ತೇವೆ ಎಂದು ಕರೀಮ್ ಖಾನ್ ತಿಳಿಸಿದ್ದಾರೆ.
ಯುದ್ಧ ಅಪರಾಧಗಳು ಎಂದರೆ ಯಾವುದೇ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುವಾಗ ಅದಕ್ಕೂ ಕೆಲವು ಕಾನೂನುಗಳು ಇರುತ್ತವೆ. ಅದನ್ನು ಉಲ್ಲಂಘಿಸುವುದೇ ಯುದ್ಧ ಅಪರಾಧ ಎನ್ನಿಸಿಕೊಳ್ಳುತ್ತದೆ. ಈ ಬಾರಿ ರಷ್ಯಾ ಪ್ರಾರಂಭದಲ್ಲಿ ತಾನು ಉಕ್ರೇನ್ ನಾಗರಿಕರ ಮೇಲೆ ಹಲ್ಲೆ ನಡೆಸುವುದಿಲ್ಲ, ಹತ್ಯೆ ಮಾಡುವುದಿಲ್ಲ.
ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸುವುದಷ್ಟೇ ನಮ್ಮ ಆದ್ಯತೆ ಎಂದು ಹೇಳಿತ್ತು. ಆದರೆ ಈಗ ರಷ್ಯಾ ಮನಸಿಗೆ ಬಂದಲ್ಲಿ ದಾಳಿ ನಡೆಸುತ್ತಿದೆ, ಶಾಲೆಗಳು, ಶಿಶುವಿಹಾರ, ಆಂಬುಲೆನ್ಸ್ಗಳನ್ನೂ ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ.