ವಾಷಿಂಗ್ಟನ್ : ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುವುದನ್ನು ನೋಡಿದ್ದೇವೆ. ಆದರೆ, ಅಮೆರಿಕದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಅಲ್ಲಿನ ಪೊಲೀಸರು ಕೋಳಿಯನ್ನು ವಶಕ್ಕೆ ಪಡೆದಿದ್ದಾರೆ.
ಅಮೆರಿಕದ ಸೇನಾ ಕಚೇರಿ ಇರುವ ಪೆಂಟಗನ್ನ ಭದ್ರತಾ ಏರಿಯಾ ಸುತ್ತ ಕೋಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಅದನ್ನು ವಶಕ್ಕೆ ಪಡೆದಿದ್ದಾರೆಂದು ಅಮೆರಿಕದ ಪ್ರಾಣಿ ದಯಾ ಸಂಘವೊಂದು ಮಾಹಿತಿ ನೀಡಿದೆ. ಆ ಕೋಳಿ ಎಲ್ಲಿಂದ ಬಂತು? ಪೆಂಟಗನ್ ಏರಿಯಾ ಒಳಗೆ ಹೇಗೆ ಬಂತು ಎಂದು ಅಧಿಕಾರಿಗಳು ಹೇಳಿಲ್ಲ.
ಕೋಳಿಯನ್ನು ಹೆನ್ನಿ ಪೆನ್ನಿ ಎಂದು ಕರೆಯಲಾಗುತ್ತಿದೆ. ಸದ್ಯ ಆ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಏನೇ ಆಗಲಿ ಇಲ್ಲಿಯವರೆಗೆ ಅನುಮಾನದ ಮೇಲೆ ಜನರನ್ನು ಬಂಧಿಸಿರುವುದನ್ನು ನೋಡಿದ್ದೇವೆ. ಆದರೆ ಕೋಳಿಯನ್ನು ಈ ರೀತಿ ಬಂಧಿಸಿರುವುದು ಇದೇ ಮೊದಲು ಅನಿಸುತ್ತದೆ.