ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲಿನ ಗುಂಡಿನ ದಾಳಿ ಯತ್ನವನ್ನು ತಡೆಯುವ ಕಾರ್ಯಾಚರಣೆಯಲ್ಲಿ ತನ್ನ ಸಂಸ್ಥೆ ವಿಫಲವಾದ ಕಾರಣದಿಂದ ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಕಿಂಬರ್ಲಿ ಚೀಟಲ್ ಅವರು ತಮ್ಮ ಹುದ್ದೆಗೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಪ್ರಚಾರ ಸಭೆಯಲ್ಲಿ 20 ವರ್ಷದ ಬಂದೂಕುಧಾರಿ ಮಾಜಿ ರಿಪಬ್ಲಿಕನ್ ಅಧ್ಯಕ್ಷ ಮತ್ತು ಪ್ರಸ್ತುತ ಶ್ವೇತಭವನದ ಅಭ್ಯರ್ಥಿಯನ್ನು ಗಾಯಗೊಳಿಸಿದ ನಂತರ ಚೀಟಲ್ ರಾಜೀನಾಮೆ ನೀಡಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸಿದ್ದವು. ಇದೀಗ ಚೀಟಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಭದ್ರತಾ ಲೋಪದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ಜತೆಗೆ ನನ್ನ ನಿರ್ದೇಶಕ ಸ್ಥಾನದಿಂದ ಕೆಳಗಿಳಿಯುವ ಕಠಿಣ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮೇಲ್‌ನಲ್ಲಿ ಬರೆಯುವ ಮೂಲಕ ಚೀಟಲ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.