ವಾಷಿಂಗ್ಟನ್: ಭಾರತದ ಸರ್ಕಾರಿ ಏಜೆಂಟರು ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಹತ್ಯೆ ಮಾಡಿದ್ದಾರೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ಬಗ್ಗೆ ಅಮೆರಿಕ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೆನಡಾ ಪ್ರಧಾನಿ ಟ್ರುಡೊ ಅವರು ಉಲ್ಲೇಖಿಸಿದ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ. ನಾವು ನಮ್ಮ ಕೆನಡಾದ ಪಾಲುದಾರರೊಂದಿಗೆ ನಿಯಮಿತ ಸಂಪರ್ಕದಲ್ಲಿರುತ್ತೇವೆ. ಹತ್ಯೆ ಸಂಬಂಧ ತನಿಖೆ ಮುಂದುವರಿಯುವುದು ಮತ್ತು ಅಪರಾಧಿಗಳನ್ನು ನ್ಯಾಯಾಲಯದ ಕಟಕಟೆಗೆ ತರುವುದು ನಿರ್ಣಾಯಕವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿರುವ ಬಗ್ಗೆ ಪ್ರಧಾನಿ ಟ್ರುಡೊ ಅವರು ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದ್ದಾರೆ. ಈ ಮಧ್ಯೆ ನಿಜ್ಜರ್ ಹತ್ಯೆಯಲ್ಲಿ ತನ್ನ ಕೈವಾಡವಿದೆ ಎಂಬ ಕೆನಡಾ ಸರ್ಕಾರದ ಹೇಳಿಕೆಗಳನ್ನು ಭಾರತ ತಿರಸ್ಕರಿಸಿದೆ. ಕೆನಡಾದ ಹೇಳಿಕೆ “ಅಸಂಬದ್ಧ ಮತ್ತು ಪ್ರೇರಿತ” ಎಂದು ಕರೆದಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆನಡಾ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಾರತ ವಿರೋಧಿ ಕುತಂತ್ರ ನಿಲ್ಲಿಸಲು ಕಾನೂನು ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಕೆನಡಾ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದೆ.