ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೊರ್ಮುಜ್ ಜಲಸಂಧಿ ಬಳಿ ಇರಾನ್‌ನ 6 ಚಿಕ್ಕ ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕ ಮಿಲಿಟರಿ ಹೇಳಿದೆ. ಅಲ್ಲದೇ, ಇರಾನ್‌ನ ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದೆ.
ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿದ ನಂತರ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ. ಜಾಗತಿಕ ತೈಲ ಮತ್ತು ಸರಕು ಸಾಗಣೆಯ ನಿರ್ಣಾಯಕ ಜಲಮಾರ್ಗದ ನಿಯಂತ್ರಣವನ್ನು ಇರಾನ್‌ನಿಂದ ವಶಪಡಿಸಿಕೊಳ್ಳಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಾಜೆಕ್ಟ್ ಫ್ರೀಡಂ ಎಂಬ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸೋಮವಾರ ಯುಎಇ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ಸೇರಿದಂತೆ ಈ ಪ್ರದೇಶದಲ್ಲಿ ಇರಾನ್ ದಾಳಿ ಮುಂದುವರಿಸಿದೆ. ಹೀಗಾಗಿ, ಎರಡೂ ಕಡೆಯಿಂದ ದಾಳಿ ನಡೆಯುತ್ತಿದ್ದು, ಏಪ್ರಿಲ್ 8ರಂದು ಆರಂಭವಾದ ಕದನ ವಿರಾಮ ಜಾರಿಯಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ನಿರಾಕರಿಸಿದ್ದಾರೆ.
ಆದರೆ, ಟ್ರಂಪ್ ಅವರ ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನಡೆಸುತ್ತಿರುವ ಪ್ರಯತ್ನಗಳನ್ನು ಕೂಪರ್ ಒಪ್ಪಿಕೊಂಡಿದ್ದಾರೆ.

