ಟೋಕಿಯೋ : ಟೋಕಿಯೋದ ಉತ್ತರದ ವಾರ್ಡ್ ಆದ ‘ಕಿಟಾ’ದಲ್ಲಿರುವ ನಾಲ್ಕು ಅಂತಸ್ತಿನ ‘ತಕಿನೊಗಾವಾ ನಂ. 3 ಪ್ರಾಥಮಿಕ ಶಾಲೆ’ಯಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಕಟ್ಟಡದ ಕೊನೆಯ ಅಂತಸ್ತಿನಲ್ಲಿರುವ ಸಂಗೀತ ಕೊಠಡಿಯ ಬಳಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಎಂದು ಟೋಕಿಯೋ ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದೆ. ನಾಲ್ಕನೇ ಅಂತಸ್ತಿನ ಕಿಟಕಿಗಳಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಜ್ವಾಲೆಗಳು ಆಕಾಶಕ್ಕೆ ಚಿಮ್ಮುತ್ತಿದ್ದ ದೃಶ್ಯಗಳು ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶಾಲೆಯಲ್ಲಿದ್ದ ನೂರಾರು ಮಕ್ಕಳು ಮತ್ತು ಶಿಕ್ಷಕರು ತಕ್ಷಣವೇ ಸುರಕ್ಷಿತವಾಗಿ ಹೊರಬಂದು ಹತ್ತಿರದ ಪಾರ್ಕ್‌ನಲ್ಲಿ ಆಶ್ರಯ ಪಡೆದರು.

ವಿಷಯ ತಿಳಿಯುತ್ತಿದ್ದಂತೆಯೇ ಹತ್ತಾರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟರು. ಸುಮಾರು ಒಂದು ಗಂಟೆಯ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.

ಬೆಂಕಿ ಆವರಿಸಿದ್ದರಿಂದ ಕಟ್ಟಡದ ಒಳಗೆ ಸಿಲುಕಿಕೊಂಡಿದ್ದ ಒಬ್ಬರು ಶಿಕ್ಷಕರು ಹಾಗೂ ಮೂವರು ಮಕ್ಕಳನ್ನು ಅಗ್ನಿಶಾಮಕ ಸಿಬ್ಬಂದಿ ಏಣಿ ಬಳಸಿ ಸುರಕ್ಷಿತವಾಗಿ ಹೊರತಂದರು. ಹೊಗೆಯಿಂದಾಗಿ ಉಸಿರಾಟದ ತೊಂದರೆ ಅನುಭವಿಸಿದ ಹಾಗೂ ಸ್ಥಳಾಂತರದ ವೇಳೆ ಸಣ್ಣಪುಟ್ಟ ಗಾಯಗಳಿಗೊಳಗಾದ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿಯಲು ಜಪಾನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.