ಫ್ರಾನ್ಸ್​: ಮೆಸೇಜಿಂಗ್​ ಅಪ್ಲಿಕೇಶನ್ ಟೆಲಿಗ್ರಾಮ್​ನಲ್ಲಿ ಅಪರಾಧ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟೆಲಿಗ್ರಾಮ್​ನ ಸ್ಥಾಪಕ ಹಾಗೂ​ ಸಿಇಒ ಪಾವೆಲ್​ ಡುರೊವ್​ ಅವರನ್ನು ಫ್ರಾನ್ಸ್​ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬುಧವಾರ ಬಿಡುಗಡೆ ಮಾಡಿದೆ.

ನಾಲ್ಕು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡುರೊವ್​ ಅವರನ್ನು ನ್ಯಾಯಾಲಯ ಬಂಧನಮುಕ್ತಗೊಳಿಸಿದ್ದು, ಮುಂದಿನ ತನಿಖೆ ಸಂಬಂಧ ದೇಶ ತೊರೆಯದಂತೆ ನಿರ್ಬಂಧ ವಿಧಿಸಿದೆ. ಬುಧವಾರ ಪ್ಯಾರಿಸ್​ನಲ್ಲಿ ಔಪಚಾರಿಕ ತನಿಖೆಗೊಳಪಡಿಸಿದ ಫ್ರೆಂಚ್​ ನ್ಯಾಯಾಧೀಶರು ಡುರೊವ್​ ಮೇಲೆ ಮೆಸೇಜಿಂಗ್​ ಅಪ್ಲಿಕೇಶನ್​ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಾಥಮಿಕ ಆರೋಪ ಹೊರಿಸಿಸಲಾಗಿದೆ.

ಶನಿವಾರ ತಡರಾತ್ರಿ ಪ್ಯಾರಿಸ್​ನ ಹೊರಗಿನ ಲೆ ಬೌರ್ಗೆಟ್​ ವಿಮಾನ ನಿಲ್ದಾಣದಲ್ಲಿ ರಷ್ಯಾ ಮೂಲದ ಪಾವೆಲ್​ ಡುರೊವ್​ ಅವರನ್ನು ಬಂಧಿಸಲಾಗಿತ್ತು. ಇದೀಗ ನಾಲ್ಕು ದಿನಗಳ ವಿಚಾರಣೆ ಬಳಿಕ ಫ್ರಾನ್ಸ್​ ನ್ಯಾಯಾಲಯ 5 ಮಿಲಿಯನ್​ ಯೂರೋಗಳ ಜಾಮೀನು ಹಣ ಪಾವತಿಸಲು ಹಾಗೂ ವಾರಕ್ಕೆ ಎರಡು ಬಾರಿ ಪೊಲೀಸ್​ ಠಾಣೆಗೆ ಹಾಜರಾಗುವಂತೆ ಆದೇಶಿಸಿ, ಬಿಡುಗಡೆಗೊಳಿಸಿದೆ.