ಬಾಂಗ್ಲಾದೇಶ: ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಾದ್ಯಂತ ಮೀಸಲಾತಿ ವಿರೋಧದ ಕಿಚ್ಚು ಮುಂದುವರಿದಿರುವ ನಡುವೆಯೇ ಪ್ರತಿಭಟನಾಕಾರರು ಶನಿವಾರ (ಆಗಸ್ಟ್‌ 10) ಬಾಂಗ್ಲಾದೇಶ ಸುಪ್ರೀಂಕೋರ್ಟ್‌ ನ ಚೀಫ್‌ ಜಸ್ಟೀಸ್‌ ಒಂದು ಗಂಟೆ ಅವಧಿಯೊಳಗೆ ರಾಜೀನಾಮೆ ನೀಡುವಂತೆ ಅಂತಿಮ ಗಡುವು ವಿಧಿಸಿದ್ದು, ಈ ಹಿನ್ನಲೆಯಲ್ಲಿ ಸಿಜೆಐ ಒಬೈದುಲ್‌ ಹಸನ್‌ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ  ದ ಡೈಲಿ ಸ್ಟಾರ್ ವರದಿ ತಿಳಿಸಿದೆ.‌

ಒಂದು ವೇಳೆ ಚೀಫ್‌ ಜಸ್ಟೀಸ್‌ ರಾಜೀನಾಮೆ ನೀಡದಿದ್ದರೆ, ಸುಪ್ರೀಂಕೋರ್ಟ್‌ ಜಡ್ಜ್‌ ಗಳ ನಿವಾಸಗಳನ್ನು ಧ್ವಂಸಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.ಶನಿವಾರ (ಆ.10) ಸಂಜೆ ತಮ್ಮ ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ಧೀನ್‌ ಅವರಿಗೆ ಕಳುಹಿಸುವುದಾಗಿ ಸಿಜೆಐ ಹಸನ್‌ ತಿಳಿಸಿದ್ದಾರೆ. ಚೀಫ್‌ ಜಸ್ಟೀಸ್‌ ಒಬೈದುಲ್‌ ಹಸನ್‌, ದಿಢೀರ್‌ ಸಭೆಯನ್ನು ಕರೆದಿದ್ದಾರೆ ಎಂಬ ಸುದ್ದಿ ಹರಿದಾಡಿದ ನಂತರ ಪ್ರತಿಭಟನೆ ಆರಂಭಗೊಂಡಿತ್ತು.

ವಿದ್ಯಾರ್ಥಿಗಳು, ವಕೀಲರು ಸೇರಿದಂತೆ ಪ್ರತಿಭಟನಾಕಾರರು ಸುಪ್ರೀಂಕೋರ್ಟ್‌ ನತ್ತ ಜಾಥಾ ಹೊರಟಿದ್ದು,ಆವರಣ ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ರಕ್ಷಣೆಗಾಗಿ ಸೇನೆಯನ್ನು ನಿಯೋಜಿಸಲಾಗಿತ್ತು ಎಂದು ವರದಿ ವಿವರಿಸಿದೆ.