ವಾಷಿಂಗ್ಟನ್: ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿದ್ದು, ಈ ಇಬ್ಬರು ಗಗನಯಾತ್ರಿಗಳು ಮುಂದಿನ ವರ್ಷ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಹೇಳಿದೆ.

ಮುಂದಿನ ಫೆಬ್ರವರಿಯಲ್ಲಿ ಬುಚ್ ಮತ್ತು ಸುನಿತಾ ಕ್ರ್ಯೂ -9 ರೊಂದಿಗೆ ಹಿಂತಿರುಗುತ್ತಾರೆ ಮತ್ತು ಸ್ಟಾರ್ಲೈನರ್ ಸಿಬ್ಬಂದಿಯಿಲ್ಲದೆ ಹಿಂತಿರುಗುತ್ತಾರೆ ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಹೇಳಿದ್ದಾರೆ.

ಬೋಯಿಂಗ್ ಬಾಹ್ಯಾಕಾಶ ನೌಕೆಯ ಥ್ರಸ್ಟರ್ ಅಸಮರ್ಪಕ ಕಾರ್ಯಗಳಿಂದ ಸುನಿತಾ ವಿಲಿಯಮ್ಸ್‌ ಮತ್ತು ಬುಚ್‌ ಹಿಂತಿರುಗುವುದು ವಿಳಂಬವಾಗಿದೆ ಎಂದು ಅವರು ಹೇಳಿದರು. ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಜೂನ್‌ 5ರಂದು ಆರಂಭಿಸಿದ್ದರು.

ಜೂನ್‌ 6ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ ತಲುಪಿದ್ದ ಅವರು ಒಂದು ವಾರ ಸಂಶೋಧನೆ ನಡೆಸಿ ವಾಪಸಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅವರು ಅಲ್ಲಿಯೇ ಸಿಲುಕಿದ್ದಾರೆ. ಇವರು ಯಾವಾಗ ಬರುತ್ತಾರೆ ಎಂಬುದರ ಕುರಿತು ನಾಸಾ ಈಗ ಮಾಹಿತಿ ನೀಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ  ಸಿಲುಕಿರುವ ಸುನೀತಾ ವಿಲಿಯಮ್ಸ್‌ ಅವರು 2025ರ ಫೆಬ್ರವರಿಯಲ್ಲಿ ವಾಪಸಾಗಲಿದ್ದಾರೆ. ಇವರು ಬೋಯಿಂಗ್‌ ಸ್ಟಾರ್‌ಲೈನರ್‌ ಬದಲು ಸ್ಪೇಸ್‌ಎಕ್ಸ್‌ನ ಕ್ರ್ಯೂ ಡ್ರ್ಯಾಗನ್‌ನಲ್ಲಿ ವಾಪಸಾಗಲಿದ್ದಾರೆ. ಸ್ಟಾರ್‌ಲೈನರ್‌ನಲ್ಲಿ ಹಲವು ತಾಂತ್ರಿಕ ದೋಷಗಳು ಉಂಟಾಗಿರುವ ಕಾರಣ ಕ್ರ್ಯೂ ಡ್ರ್ಯಾಗನ್‌ನಲ್ಲಿ ಕರೆದುಕೊಂಡು ಬರಲು ತೀರ್ಮಾನಿಸಲಾಗಿದೆ ಎಂದು ನಾಸಾ ತಿಳಿಸಿದೆ.