ಕಾರಕಾಸ್: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂಭವಿಸಿದ್ದು, ಪ್ರಕೃತಿಯ ಈ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1,719ಕ್ಕೆ ಏರಿಕೆಯಾಗಿದೆ.

ಅತಿ ಹೆಚ್ಚು ತೀವ್ರತೆ ಹೊಂದಿದ್ದ ಈ ಭೂಕಂಪದಿಂದಾಗಿ ದೇಶದ ಹಲವು ನಗರಗಳಲ್ಲಿ ನೂರಾರು ವಸತಿ ಸಮುಚ್ಚಯಗಳು ಹಾಗೂ ವಾಣಿಜ್ಯ ಕಟ್ಟಡಗಳು ಇಸ್ಪೀಟ್ ಎಲೆಗಳಂತೆ ನೆಲಸಮಗೊಂಡಿವೆ. ಪ್ರಮುಖ ರಸ್ತೆಗಳು, ವಿದ್ಯುತ್ ಸಂಪರ್ಕ ಹಾಗೂ ಸಂವಹನ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿದ್ದು, ದುರಂತದ ತೀವ್ರತೆ ಹೆಚ್ಚಾಗಲು ಕಾರಣವಾಗಿದೆ.

ಪ್ರಸ್ತುತ ದುರಂತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕುಸಿದು ಬಿದ್ದಿರುವ ಕಾಂಕ್ರೀಟ್ ಅವಶೇಷಗಳ ಅಡಿಯಲ್ಲಿ ಇನ್ನೂ ನೂರಾರು ಸಾರ್ವಜನಿಕರು ಸಿಲುಕಿರುವ ಆತಂಕವಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಭೂಕಂಪದ ಭೀಕರ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ಪ್ರಾಣಭಯದಿಂದ ಕಿರುಚುತ್ತಾ ರಸ್ತೆಗಳಿಗೆ ಓಡಿ ಬರುತ್ತಿರುವ ಮತ್ತು ಕಟ್ಟಡಗಳು ಧರೆಗುರುಳುತ್ತಿರುವ ದೃಶ್ಯಗಳು ಕಣ್ಣು ತೇವಗೊಳಿಸುವಂತಿದ್ದು, ಸಂತ್ರಸ್ತರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತುರ್ತು ನೆರವು ಹರಿದುಬರುತ್ತಿದೆ.