ಜಕಾರ್ತ: ಇಂಡೋನೇಷ್ಯಾದ ಬಾಂಡಾ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಮಂಗಳವಾರ ಮುಂಜಾನೆ ಸಂಭವಿಸಿದ್ದು, ಮಲುಕು ಮತ್ತು ಪಪುವಾ ಸೇರಿದಂತೆ ದೇಶದ ಪೂರ್ವ ಭಾಗದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಸ್ಥಳೀಯ ಕಾಲಮಾನ ಮುಂಜಾನೆ 4.11ಕ್ಕೆ ಈ ಭೂಕಂಪ ಸಂಭವಿಸಿದೆ. ಆದಾಗ್ಯೂ, ವಿಶ್ಲೇಷಣಾ ವರದಿಗಳ ಪ್ರಕಾರ ಇದರಿಂದ ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆಯ ಭೂಕಂಪ ಮತ್ತು ಸುನಾಮಿ ವಿಭಾಗದ ನಿರ್ದೇಶಕ ಡಾ. ವಿಜಯಾಂಟೊ ಸ್ಪಷ್ಟಪಡಿಸಿದ್ದಾರೆ.

ಭೂಕಂಪದ ಕೇಂದ್ರಬಿಂದುವು ಆಗ್ನೇಯ ಮಲುಕುದಿಂದ ನೈಋತ್ಯಕ್ಕೆ 132 ಕಿಲೋಮೀಟರ್ ದೂರದಲ್ಲಿ, ಸಮುದ್ರದ 97 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ ಇದರ ತೀವ್ರತೆಯನ್ನು 7.1 ಎಂದು ಅಂದಾಜಿಸಲಾಗಿತ್ತು, ಆದರೆ ಬಳಿಕ ಅದನ್ನು 6.8ಕ್ಕೆ ಪರಿಷ್ಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಇಂಡೋನೇಷ್ಯಾ ಕಾಲಮಾನ ಮುಂಜಾನೆ 4.25ರವರೆಗಿನ ಮಾಹಿತಿಯಂತೆ ಯಾವುದೇ ಆಫ್ಟರ್‌ಶಾಕ್ (ಭೂಕಂಪನದ ನಂತರದ ನಡುಕ) ಚಟುವಟಿಕೆಗಳು ಕಂಡುಬಂದಿಲ್ಲ. ಆದರೂ ಬಿಎಂಕೆಜಿ ನಿರಂತರವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಕಾಲಕಾಲಕ್ಕೆ ನವೀಕೃತ ಮಾಹಿತಿಯನ್ನು ಒದಗಿಸಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೌಮ್ಲಾಕಿ, ತುವಾಲ್, ಸೊರೊಂಗ್ ಮತ್ತು ಮನೋಕ್ವಾರಿ ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಭೂಮಿ ನಡುಗಿದೆ. ದೊಡ್ಡ ಟ್ರಕ್ ಒಂದು ಹಾದುಹೋಗುವಾಗ ಉಂಟಾಗುವ ಕಂಪನದಂತಹ ಅನುಭವ ತಮಗಾಗಿದೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ. ಇದೇ ವೇಳೆ ನಬೀರೆಯಲ್ಲಿ ಸ್ವಲ್ಪ ಕಡಿಮೆ ಪ್ರಮಾಣದ ನಡುಕ ಕಂಡುಬಂದಿದೆ.

ಭೂಕಂಪದಿಂದಾಗಿ ಬಿರುಕು ಬಿಟ್ಟಿರುವ ಅಥವಾ ಹಾನಿಗೊಳಗಾಗಿರುವ ಕಟ್ಟಡಗಳಿಂದ ದೂರವಿರುವಂತೆ ಡಾ. ವಿಜಯಾಂಟೊ ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ. ಆತಂಕಪಡದೆ ಶಾಂತವಾಗಿರಬೇಕು ಮತ್ತು ಬಿಎಂಕೆಜಿ ಸಂಸ್ಥೆಯ ಅಧಿಕೃತ ಸಂವಹನ ವಾಹಿನಿಗಳ ಮೂಲಕ ಬರುವ ದೃಢೀಕೃತ ಮಾಹಿತಿಯನ್ನು ಮಾತ್ರ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.