ವಾಷಿಂಗ್ಟನ್‌: ಶ್ವೇತಭವನದ ಸಮೀಪ ಗುಂಡು ಹಾರಿಸಿದ ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಏಜೆಂಟ್‌ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿದ್ದರು. ಆದರೆ ಈ ಘಟನೆಯಿಂದ ಅವರ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸೀಕ್ರೆಟ್ ಸರ್ವೀಸ್ ಸಂವಹನ ಮುಖ್ಯಸ್ಥ ಅಂಥೋನಿ ಗುಗ್ಲಿಯೆಲ್ಮಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಸೀಕ್ರೆಟ್ ಸರ್ವೀಸ್, ‘ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಶನಿವಾರ ಸಂಜೆ 6ಗಂಟೆಗೆ ಒಬ್ಬ ವ್ಯಕ್ತಿ ಬ್ಯಾಗ್‌ನಿಂದ ಬಂದೂಕು ತೆಗೆದು ಗುಂಡು ಹಾರಿಯಲು ಪ್ರಾರಂಭಿಸಿದನು’.

‘ತಕ್ಷಣವೇ ಸೀಕ್ರೆಟ್ ಸರ್ವಿಸ್ ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು. ಶಂಕಿತ ಬಂದೂಕುಧಾರಿಯನ್ನು ಆಸ್ಪತ್ರೆ ಸಾಗಿಸಿದರೂ ಅಲ್ಲಿ ಮೃತಪಟ್ಟಿರುವುದಾಗಿ ದೃಢೀಕರಿಸಲಾಯಿತು. ಓರ್ವ ವ್ಯಕ್ತಿಗೆ ಗುಂಡು ತಗುಲಿದೆ’ ಎಂದು ತಿಳಿಸಿದೆ.

‘ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಶ್ವೇತಭವನದಲ್ಲಿದ್ದರು. ಆದರೆ ಅವರ ಕಾರ್ಯ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ತಿಳಿಸಿದೆ.