ಅಮೆರಿಕ : ಸುಮಾರು ಇನ್ನೂರಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಹಡಗೊಂದು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 19 ಜನರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್ ಅವರು, ಮೆಕ್ಸಿಕೋದ ನೌಕಾಪಡೆಗೆ ಸೇರಿದ ಕ್ವಾವುಟೆಮೊಕ್ ಹಡಗು ನಗರದ ಬ್ರೂಕ್ಲಿನ್‌ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನೌಕಾಪಡೆಯ ಕೆಡೆಟ್‌ಗಳನ್ನು ಹೊತ್ತೊಯ್ಯುತ್ತಿದ್ದ ಈ ಹಡಗು ದೀಪಗಳಿಂದ ಅಲಂಕೃತವಾಗಿತ್ತು ಎಂದು ತಿಳಿಸಿದ್ದಾರೆ.

ಕ್ವಾವುಟೆಮೊಕ್ ಹಡಗು ರಾತ್ರಿ ಸುಮಾರು 9 ಗಂಟೆಯ ಸುಮಾರಿಗೆ ಈಸ್ಟ್‌ ರಿವರ್‌ 147 ಅಡಿ ಎತ್ತರದ ಎರಡು ಸೇತುವೆಗೆ ಡಿಕ್ಕಿ ಹೊಡೆದು ಸೇತುವೆಯ ಮಧ್ಯದಲ್ಲೇ ಸಿಲುಕಿದೆ. ಡಿಕ್ಕಿಯ ರಭಸಕ್ಕೆ ಹಡಗಿನ ಡೆಕ್‌ ಮೇಲಿದ್ದ ಮೆಕ್ಸಿಕೋ ನೌಕಾಪಡೆಯ ಹಲವು ನಾವಿಕರು ನದಿಗೆ ಹಾರಿ ಬಿದ್ದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ನ್ಯೂಯಾರ್ಕ್ ಅಗ್ನಿಶಾಮಕ ದಳ, ‘ಕ್ವಾವುಟೆಮೊಕ್’ ಹಡಗಿನಲ್ಲಿದ್ದ ನಾವಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಗಾಯಗೊಂಡ 19 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.