ಕಠ್ಮಂಡು: ಉತ್ತರ ನೇಪಾಳದಲ್ಲಿ ಬುಧವಾರ ಮುಂಜಾನೆ ದಿಢೀರ್ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಗಡಿ ಭಾಗದ ಗ್ರಾಮಗಳು ಜಲಾವೃತಗೊಂಡಿದ್ದು, ಎಂಟು ಮಂದಿ ಸಾವನಪ್ಪಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದೆ. ನದಿಯ ರಭಸಕ್ಕೆ ಹಲವಾರು ವಾಹನಗಳು ಹಾಗೂ ಸರಕು ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ನದಿ ತಟದ ಹಲವು ಜಿಲ್ಲೆಗಳಿಗೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಟಿಬೆಟ್ ಕಡೆಯಿಂದ ಹರಿದುಬಂದ ಬೋಟೆ ಕೋಶಿ ನದಿಯಲ್ಲಿ ದಿಢೀರನೆ ನೀರಿನ ಮಟ್ಟ ಏರಿಕೆಯಾಗಿ ಜಲಪ್ರಳಯ ಸೃಷ್ಟಿಯಾಗಿದೆ. ಇದರಿಂದ ಕಾಠ್ಮಂಡುವಿನಿಂದ ಸುಮಾರು 125 ಕಿ.ಮೀ ದೂರದಲ್ಲಿರುವ ರಸುವಾ ಜಿಲ್ಲೆಯ ಟಿಮುರೆ ಹಾಗೂ ಸ್ಯಾಫ್ರುಬೆಸಿ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದ ಅನಾಹುತ ಸಂಭವಿಸಿದೆ ಎಂದು ನೇಪಾಳ ಸೇನೆ ತಿಳಿಸಿದೆ. ರಸುವಾ ಸುಂಕ ಕಚೇರಿ ಆವರಣದಲ್ಲಿದ್ದ ಅನೇಕ ವಾಹನಗಳು ಮತ್ತು ಸರಕುಗಳು ಕೊಚ್ಚಿಹೋಗಿದ್ದು, ಇತ್ತೀಚೆಗಷ್ಟೇ ನಿರ್ಮಿಸಲಾಗಿದ್ದ ಸೇತುವೆಯೊಂದು ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.
ಪ್ರವಾಹದ ತೀವ್ರತೆ ಹೆಚ್ಚಾಗಿರುವುದರಿಂದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರಿಗೆ ಸುರಕ್ಷತಾ ಸೂಚನೆ ನೀಡಿದೆ. ರಸುವಾ, ನುವಾಕೋಟ್, ಧಾಡಿಂಗ್, ಚಿತ್ವಾನ್ ಮತ್ತು ಗೋರ್ಖಾ ಜಿಲ್ಲೆಗಳ ನದಿ ಪಾತ್ರದಲ್ಲಿ ವಾಸಿಸುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿ ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧುಮುಕಿದ್ದಾರೆ. ತ್ರಿಶೂಲಿ ನದಿ ತಟದಲ್ಲಿ ನಾಪತ್ತೆಯಾದವರ ಹುಡುಕಾಟಕ್ಕಾಗಿ ಸೇನೆಯ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಜೊತೆಗೆ, ತುರ್ತು ವೈದ್ಯಕೀಯ ತಂಡವನ್ನು ಒಳಗೊಂಡ ಮಿಲಿಟರಿ ಹೆಲಿಕಾಪ್ಟರ್ ಒಂದನ್ನು ರಸುವಾ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಪ್ರವಾಹದಿಂದ ಉಂಟಾಗಿರುವ ಒಟ್ಟು ಹಾನಿಯ ನಿಖರ ವಿವರಗಳು ಇನ್ನಷ್ಟೇ ತಿಳಿಯಬೇಕಿದ್ದು, ಮಾಹಿತಿ ಸಂಗ್ರಹಣೆ ಪ್ರಗತಿಯಲ್ಲಿದೆ. ಕಳೆದ ವರ್ಷವೂ ಇದೇ ಬೋಟೆ ಕೋಶಿ ನದಿಯಲ್ಲಿ ಮಂಜುಗಡ್ಡೆ ಸರೋವರ ಒಡೆದು ಸಂಭವಿಸಿದ ಭೀಕರ ಪ್ರವಾಹಕ್ಕೆ ಹತ್ತು ಜನರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಮತ್ತೆ ಅದೇ ಮಾದರಿಯ ಜಲಪ್ರಳಯ ಸೃಷ್ಟಿಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.

